ಮೈಸೂರು | ಮಲ್ಲಿಕಾ ಮಾವಿನ ಸಿಹಿಗೆ ಮನಸೋತ ಗ್ರಾಹಕರು
ಎರಡು ದಿನಗಳ ಸಂತೆ ಆರಂಭ; ಹಣ್ಣು, ತರಕಾರಿ ಖರೀದಿಸಿದ ಜನರು

ಮೈಸೂರು : ಹಿರಿಯ ಸಾಹಿತಿ ದೇವನೂರ ಮಹಾದೇವ ಅವರ ನಮ್ಮ ಬನವಾಸಿ ತೋಟದಲ್ಲಿ ರಾಸಾಯನಿಕ ಮುಕ್ತವಾಗಿ, ನೈಸರ್ಗಿಕವಾಗಿ ಬೆಳೆಯಲಾಗಿರುವ ಮಲ್ಲಿಕಾ ತಳಿಯ ಮಾವಿನ ಹಣ್ಣು ಹಾಗೂ ತರಕಾರಿಗಳ ಎರಡು ದಿನಗಳ ಸಂತೆ ಗುರುವಾರ ಆರಂಭವಾಗಿದ್ದು, ಗ್ರಾಹಕರು ಖರೀದಿಗೆ ಮುಂದಾಗಿದ್ದಾರೆ.
ಕುವೆಂಪುನಗರದ ರಾಘವೇಂದ್ರ ಸ್ವಾಮಿ ದೇವಸ್ಥಾನದ ಸಮೀಪವಿರುವ ಅರಳಿಕಟ್ಟೆಯಲ್ಲಿ ಸಂತೆಯನ್ನು ಆಯೋಜಿಸಲಾಗಿದ್ದು, ಮಾರಾಟದ ಜತೆಗೆ ರಾಸಾಯನಿಕ ಮುಕ್ತ ಹಣ್ಣು ತರಕಾರಿಗಳ ವಿಶೇಷತೆ ಹಾಗೂ ಪ್ರಯೋಜನಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲಾಯಿತು. ವಿವಿಧ ಬಗೆಯ ತರಕಾರಿ, ಹಣ್ಣುಗಳು ಮಾತ್ರವಲ್ಲದೆ ಸಾವಯವ ಬೆಲ್ಲ, ಅಡುಗೆ ಎಣ್ಣೆ, ತಂಗಿನ ಎಣ್ಣೆ ಸೇರಿದಂತೆ ನೈಸರ್ಗಿಕವಾಗಿ ತಯಾರಿಸಲ್ಪಟ್ಟ ಹಲವಾರು ಉತ್ತನಗಳನ್ನು ಗ್ರಾಹಕರು ಖರೀದಿಸಿದರು.
ರೈತರಿಂದ ನೇರ ಮಾರಾಟ: ಎರಡು ದಿನಗಳ ಈ ಸಂತೆಯಲ್ಲಿ ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುತ್ತಿದ್ದಾರೆ. ಜುಲೈ 5ರಂದು ಕೂಡಾ ಸಂತೆಯೂ ಮುಂದುವರೆಯಲಿದೆ.
ಇತ್ತೀಚಿನ ದಿನಗಳಲ್ಲಿ ವಯಸ್ಕರು, ಮಕ್ಕಳಲ್ಲೂ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿವೆ. ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಬಹುತೇಕ ತರಕಾರಿ, ಹಣ್ಣುಗಳು ರಾಸಾಯನಿಕಯುಕ್ತ ಪದ್ಧತಿಯಲ್ಲಿ ಬೆಳೆದಿರುವುದೇ ಇದಕ್ಕೆ ಕಾರಣವಾಗಿದೆ. ಹಾಗಾಗಿ, ಜನರು ರಾಸಾಯನಿಕ ಮುಕ್ತ ಕೃಷಿ ಉತ್ಪನಗಳನ್ನು ಬಳಸಿ ಆರೋಗ್ಯ ಕಾಪಾಡಿಕೊಳ್ಳಬೇಕು.
-ಡಾ.ಎಚ್.ಎಲ್.ವಸಂತಕುಮಾರ, ಕೃಷಿ ವಿಜ್ಞಾನಿ.
ನೈಸರ್ಗಿಕ ಪದ್ಧತಿಯಲ್ಲಿ ಬೆಳೆದ ಮಲ್ಲಿಕಾ ಮಾವಿನ ಹಣ್ಣು ತುಂಬಾ ಸಿಹಿಯಾಗಿದ್ದು, ಮಾವಿನ ಹಣ್ಣಿನ ಋತು ಮುಗಿದ ಬಳಿಕವೂ ಮಲ್ಲಿಕಾ ಹಣ್ಣು ಬರುತ್ತದೆ. ಜೊತೆಗೆ ಆಕಾರದಲ್ಲೂ ಈ ತಳಿ ಇತರೆ, ಮಾವಿನ ಹಣ್ಣುಗಳಿಗಿಂತ ಭಿನ್ನವಾಗಿದೆ. ಸಾರ್ವಜನಿಕರು ನೈಸರ್ಗಿಕವಾಗಿ ಬೆಳೆದ ಹಣ್ಣು, ತರಕಾರಿಗಳನ್ನು ಬಳಸಿ ಆರೋಗ್ಯ ಕಾಪಾಡಿಕೊಳ್ಳಬೇಕು.
-ಡಾ.ಸ್ವಾಮಿ ಆನಂದ್, ಸಂಚಾಲಕರು, ಕರ್ನಾಟಕ ರಾಜ್ಯ ನೈಸರ್ಗಿಕ ಕೃಷಿ.
ನಾವೇ ಬೆಳೆದ ಮಲ್ಲಿಕಾ ಬೆನೆ ಮಾವಿನ ಹಣ್ಣನ್ನು ಸ್ವತಃ నింತು ಮಾರಾಟ ಮಾಡುವುದು ಹೆಚ್ಚಿನ ಖುಷಿ ನೀಡುತ್ತದೆ. ಇದರಿಂದ ಗ್ರಾಹಕರೊಂದಿಗೆ ನೇರವಾದ ಸಂವಾದ ಸಾಧ್ಯವಾಗುತ್ತದೆ. ನೈಸರ್ಗಿಕವಾಗಿ ಬೆಳೆದ ಮಾವಿನ ಹಣ್ಣು ಹಾಗೂ ತರಕಾರಿ ಗುಣಮಟ್ಟದ ಬಗ್ಗೆ ಗ್ರಾಹಕರ ಅಭಿಪ್ರಾಯವನ್ನು ನೇರವಾಗಿ ತಿಳಿದುಕೊಳ್ಳಬಹುದು. ಅವರ ಸಂಪರ್ಕವೂ ಆಗುತ್ತದೆ.
-ಟಿ.ಜಿ. ಎಸ್ ಅವಿನಾಶ್, ಲೇಖಕ ಮತ್ತು ಕೃಷಿಕರು.







