ಮೈಸೂರು | ʼಪ್ರೀತಿ ನಿರಾಕರಣೆʼ ಚಾಕು ಇರಿದು ತಾಳಿ ಕಟ್ಟಿದ ಸ್ನೇಹಿತ : ಯುವತಿ ಮೃತ್ಯು

ಮೈಸೂರು : ಪ್ರೀತಿ ನಿರಾಕರಿಸಿದ ಸ್ನೇಹಿತೆಯನ್ನು ಜೊತೆಯಲ್ಲಿ ಕರೆದುಕೊಂಡು ಬಂದು ಚಾಕುವಿನಿಂದ ಇರಿದ ಯುವಕ ಆಸ್ಪತ್ರೆಗೆ ಸೇರಿಸಿ ತಾಳಿ ಕಟ್ಟಿ ವಿಕೃತಿ ಮರೆದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಯುವತಿ ಶನಿವಾರ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ನಿವಾಸಿ ಪೂರ್ಣಿಮಾ (36) ಮೃತ ಯುವತಿ. ಅದೇ ಗ್ರಾಮದ ಅಭಿಷೇಕ್ ಮತ್ತು ಆಕೆ ಬಾಲ್ಯ ಸ್ನೇಹಿತರಾಗಿದ್ದರು.
ಪೂರ್ಣಿಮಾ ಮೈಸೂರಿನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ತನ್ನನ್ನು ಪ್ರೀತಿಸುವಂತೆ ಯುವಕ ಒತ್ತಾಯಿಸುತ್ತಿದ್ದ. ಮನೆಯವರ ಒಪ್ಪಿಗೆ ಇಲ್ಲದ ಕಾರಣ ಆಕೆ ಪ್ರೀತಿ ನಿರಾಕರಿಸುತ್ತಿದ್ದಳು. ಶುಕ್ರವಾರ ಮಧ್ಯಾಹ್ನ ಇಬ್ಬರೂ ಕೃಷ್ಣಮೂರ್ತಿಪುರಂನಲ್ಲಿರುವ ಉದ್ಯಾನಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ.
ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿಯಾಗಿದ್ದು, ಆತ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಆತನೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಅಲ್ಲಿ ಆಕೆ ಅರೆಪ್ರಜ್ಞಾವಸ್ಥೆಯಲ್ಲಿದ್ದಾಗ ತಾಳಿ ಕಟ್ಟಿ ಮೊಬೈಲ್ ಫೋನ್‌ನಲ್ಲಿ ಸೆಲ್ಪಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾನೆ. ಪರಾರಿಯಾಗಿದ್ದ ಅಭಿಷೇಕ್ ನನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈ ಸಂಬಂಧ ಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.