ಪಾಲಿಕೆ ನೌಕರರ ಬೇಡಿಕೆ ಸಿಎಂ ಗಮನಕ್ಕೆ ತರುತ್ತೇನೆ : ಸಚಿವ ಮಹದೇವಪ್ಪ

ಮೈಸೂರು : ನಿಮ್ಮ ವಿವಿಧ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತಂದು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮುಷ್ಕರ ನಿರತ ಮಹಾನಗರ ಪಾಲಿಕೆ ನೌಕರರಿಗೆ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಭರವಸೆ ನೀಡಿದ್ದಾರೆ.
ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೈಸೂರು ಮಹಾನಗರ ಪಾಲಿಕೆ ಆವರಣದಲ್ಲಿ ಕಳೆದ ಐದು ದಿನಗಳಿಂದ ಮೈಸೂರು ಮಹಾನಗರಪಾಲಿಕೆ ನೌಕರರು, ಪೌರಕಾರ್ಮಿಕರು ನಡೆಸುತ್ತಿರುವ ಮುಷ್ಕರ ಸ್ಥಳಕ್ಕೆ ಶನಿವಾರ ಆಗಮಿಸಿದ ಸಚಿವರು, ನೌಕರರ ಸಮಸ್ಯೆ ಮತ್ತು ಬೇಡಿಕೆಗಳನ್ನು ಆಲಿಸಿ ಮನವಿ ಸ್ವೀಕರಿಸಿ ಬಳಿಕ ಮಾತನಾಡಿದರು.
ಏಳನೇ ವೇತನ ಜಾರಿಯಲ್ಲಿ ಅನಾನೂಕೂಲ, ‘ಸಿ’ಮತ್ತು ಆರ್’ ತಿದ್ದುಪಡಿಯಾಗದೆ ತೊಂದರೆ ಸೇರಿದಂತೆ ಹಲವು ಸಮಸ್ಯೆಗಳನ್ನು ನಗರಾಭಿವೃದ್ಧಿ ಇಲಾಖೆ ಗಮನಕ್ಕೆ ತಂದಿರುವುದಾಗಿ ಹೇಳಿದ್ದೀರಿ. ಅಲ್ಲಿನ ಕಾರ್ಯದರ್ಶಿಗಳು ಹಣಕಾಸು ಇಲಾಖೆ ಅನುಮತಿ ಬೇಕು ಎಂದು ಹೇಳಿರುವುದು ಸಮಂಜಸವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತಂದು ಯಾವುದನ್ನು ಪರಿಹರಿಸಬಹುದು ಅವುಗಳನ್ನು ಶೀಘ್ರದಲ್ಲಿ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್ ಗೌಡ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯ್ಯೂಬ್ ಖಾನ್, ಹಲವರು ಉಪಸ್ಥಿತರಿದ್ದರು.







