ಸಮಾಜ ಕಟ್ಟಲು ಭೂ ಕಂದಾಯ ಇಲಾಖೆ ಬುನಾದಿ : ಸಂಸದ ಜಿ.ಕುಮಾರ್ ನಾಯಕ್
ಕೆ.ಎನ್.ಲಿಂಗಪ್ಪರ ‘ಕರ್ನಾಟಕದಲ್ಲಿ ಭೂಕಂದಾಯ ಆಡಳಿತ ನಡೆದು ಬಂದ ದಾರಿ’ ಪುಸ್ತಕ ಬಿಡುಗಡೆ

ಮೈಸೂರು: ಸಮಾಜ ಕಟ್ಟಲು ಭೂ ಕಂದಾಯ ಇಲಾಖೆ ಬುನಾದಿ ಎಂದು ನಿವೃತ್ತ ಐಎಎಸ್ ಅಧಿಕಾರಿ, ರಾಯಚೂರು ಲೋಕಸಭಾ ಕ್ಷೇತ್ರದ ಸಂಸದ ಜಿ.ಕುಮಾರ್ ನಾಯಕ್ ಹೇಳಿದ್ದಾರೆ.
ಅಭಿರುಚಿ ಪ್ರಕಾಶನದ ವತಿಯಿಂದ ಮುಕ್ತ ವಿವಿಯ ಕಾವೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆ.ಎನ್.ಲಿಂಗಪ್ಪ ರಚನೆಯ ‘ಕರ್ನಾಟಕದಲ್ಲಿ ಭೂಕಂದಾಯ ಆಡಳಿತ ನಡೆದು ಬಂದ ದಾರಿ’ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕಂದಾಯ ಇಲಾಖೆ ಮಾತೃಇಲಾಖೆ. ರಾಜ್ಯವೊಂದರ ಆಡಳಿತ ಚೆನ್ನಾಗಿರಬೇಕಾದರೆ ಕಂದಾಯ ಆಡಳಿತ ಚೆನ್ನಾಗಿರಬೇಕು. ಆಡಳಿತದಲ್ಲಿ ಜನರ ನಡುವೆ ಸೌಹಾರ್ದ ಮುಖ್ಯ. ಹಾಗಾಗಿ, ಯಾವ ಆಡಳಿತದಲ್ಲಿ ಕಂದಾಯ ವ್ಯವಸ್ಥೆ ಸರಿಯಾಗಿದೆಯೋ ಅಲ್ಲಿ ಶಾಂತಿಯೂ ಇರುತ್ತದೆ. ಕಂದಾಯ ಇಲಾಖೆ ಕಾರ್ಯಕ್ಷಮತೆ ಮೇಲೆ ಸೌಧ ಕಟ್ಟಿದ್ದೇವೆ ಎಂದರು.
ದೇಶದ ಜನರಿಗೆ ಮೊದಲ ಗ್ಯಾರಂಟಿಗಳನ್ನು ಸಂವಿಧಾನದ ಮೂಲಕ ನೀಡಲಾಗಿದೆ. ಈಗ ಸರಕಾರಗಳು ನೀಡುತ್ತಿರುವ ಗ್ಯಾರಂಟಿಗಳು ಸಂವಿಧಾನದ ಗ್ಯಾರಂಟಿಗಳನ್ನು ಪರಿಣಾಮಕಾರಿಯಾಗಿ ನಿರೂಪಿಸುವ ಮೆಟ್ಟಿಲುಗಳು ಎಂದು ಅವರು ಹೇಳಿದರು.
ಇಂದು ಎಷ್ಟು ಯೋಜನೆಗಳನ್ನು ಜಾರಿ ಮಾಡಬಹುದು ಎಂದು ನೋಡುತ್ತಿದ್ದೇವೆ. ಸರಕಾರದ ಗ್ಯಾರಂಟಿಗಳ ಬಗ್ಗೆ ಹೆಚ್ಚು ಮಾತನಾಡುತ್ತೇವೆ. ಒಂದಷ್ಟು ಹಣವನ್ನು ಹೆಣ್ಣು ಮಕ್ಕಳ ಅಕೌಂಟಿಗೆ ಹಾಕುವುದು, ಸರಕಾರಿ ಬಸ್‌ಗಳಲ್ಲಿ ಹೆಣ್ಣು ಮಕ್ಕಳ ಪ್ರಯಾಣಕ್ಕೆ ಉಚಿತ ವ್ಯವಸ್ಥೆ ನೀಡುವುದು. ಹೀಗೆ ನಮ್ಮ ವ್ಯಾಪ್ತಿಯಲ್ಲಿ ನಮ್ಮ ಕಲ್ಪನೆಗೆ ಕಾಣುವ ಗ್ಯಾರಂಟಿ ನೀಡಲಾಗಿದೆ. ಆದರೆ, ಇವುಗಳು ದೇಶದ ಮೊದಲ ಗ್ಯಾರಂಟಿಗಳಲ್ಲ. ಬದಲಿಗೆ ಸಂವಿಧಾನ ಮೂಲಕ ನೀಡಿರುವ ರೈಟ್ ಟು ಎಜುಕೇಶನ್, ರೈಟ್ ಟು ಇನ್‌ಫಾರ್ಮೇಶನ್ ಇವುಗಳು ಮೊದಲ ಗ್ಯಾರಂಟಿಗಳು ಎಂದರು.
ಕೆ.ಎನ್.ಲಿಂಗಪ್ಪ ಅವರು ಒಳ್ಳೆಯ ಪುಸ್ತಕ ಬರೆದಿದ್ದಾರೆ. ಅವರ ಕೆಲಸ ಪ್ರಶಂಸನೀಯ. ಭೂಕಂದಾಯದ ಬಗ್ಗೆ ಬೇರೆ ಭಾಷೆಯಲ್ಲಿ ಇಂತಹ ಪುಸ್ತಕ ಇವೆ. ಆದರೆ, ಲಿಂಗಪ್ಪ ಭೂಕಂದಾಯದ ಬಗ್ಗೆ ಎಲ್ಲ ಮಾಹಿತಿ ಒಳಗೊಂಡ ಪುಸ್ತಕವನ್ನು ಕನ್ನಡದಲ್ಲಿ ಬರೆದಿದ್ದಾರೆ. ಇಲ್ಲಿ ವೇದಗಳ ಕಾಲದಿಂದ ಇತ್ತೀಚಿನವರೆಗಿನ ಭೂಕಂದಾಯದ ಎಲ್ಲ ಮಾಹಿತಿ ನೀಡಿದ್ದಾರೆ. ವಿಶೇಷವಾಗಿ ಸಾಮಾಜಿಕ ನ್ಯಾಯದ ಬಗ್ಗೆ, ಪ್ರಜಾಪ್ರಭುತ್ವದ ಬಗ್ಗೆಯೂ ಬರೆಯುತ್ತಿದ್ದಾರೆ ಎಂದರು.
ನಿವೃತ್ತ ಕೆಎಎಸ್ ಅಧಿಕಾರಿ ಪುಟ್ಟಮಾದಯ್ಯ ಪುಸ್ತಕ ಕುರಿತು ಮಾತನಾಡಿದರು. ರಾಜ್ಯ ಚುನಾವಣಾ ಆಯೋಗದ ಮಾಜಿ ಆಯುಕ್ತ ಪಿ.ಎನ್.ಶ್ರೀನಿವಾಸಾಚಾರಿ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಕೆ.ಎನ್.ಲಿಂಗಪ್ಪ, ಪ್ರಕಾಶಕ ಅಭಿರುಚಿ ಗಣೇಶ್, ನಿವೃತ್ತ ಡಿಡಿಎಲ್‌ಆರ್ ದೇವರಾಜ್ ಇದ್ದರು.
ಕಂದಾಯ ಇಲಾಖೆ ಹೇಗೆ ಪುರಾತನ ಇಲಾಖೆ ಎಂಬುದನ್ನು ದಾಖಲಿಸಲು ಪುಸ್ತಕ ಬರೆದೆ: ಕೆ.ಎನ್.ಲಿಂಗಪ್ಪ
ನಾನು ಅಧಿಕಾರಿಯಾಗಿದ್ದಾಗ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ಹೊಸದಾಗಿ ಆಯ್ಕೆಯಾದ ತಹಶೀಲ್ದಾರ್‌ಗಳಿಗೆ ತರಬೇತಿ ನೀಡುತ್ತಿದ್ದೆ. ಆ ವೇಳೆ ಕಂದಾಯ ಇಲಾಖೆ ಹೇಗೆ ಪುರಾತನ ಇಲಾಖೆ ಎನ್ನುವ ಪ್ರಶ್ನೆಯನ್ನು ಹಲವರು ಕೇಳುತ್ತಿದ್ದರು. ಆಗ ನನಗೆ ಗೊತ್ತಿರುವುದನ್ನು ಹೇಳಿ ನಿಭಾಯಿಸುತ್ತಿದ್ದೆ. ಆದರೆ ಈ ಪ್ರಶ್ನೆ ನನ್ನ ತಲೆಯಲ್ಲಿ ದುಂಬಿ ರೀತಿ ಕೊರೆಯಲು ಶುರುಮಾಡಿತು. ಬಳಿಕ ಹಲವಾರು ಪುಸ್ತಕಗಳನ್ನು ಅಧ್ಯಯನ ಮಾಡಿ ಸ್ನೇಹಿತರೊಂದಿಗೆ ಚರ್ಚೆ ಮಾಡಿ ಎಲ್ಲ ಮಾಹಿತಿಗಳನ್ಮು ಸಂಗ್ರಹಿಸಿ ನಿವೃತ್ತಿ ನಂತರ 2016ರಿಂದ ಪುಸ್ತಕ ಬರೆಯಲು ಪ್ರಾರಂಭ ಮಾಡಿದೆ. ಅದು ಈಗ ಮುಕ್ತಾಯಗೊಂಡು ಲೋಕಾರ್ಪಣೆಗೊಳ್ಳುತ್ತಿದೆ. ಇದರಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಎಲ್ಲ ವಿಷಯಗಳು ಒಳಗೊಂಡಿದೆ ಎಂದು ಎಂದು ಕೃತಿ ಕರ್ತೃ ಕೆ.ಎನ್.ಲಿಂಗಪ್ಪ ಹೇಳಿದರು.







