ಮೈಸೂರು | ಭ್ರೂಣ ಲಿಂಗ ಪತ್ತೆ, ಹತ್ಯೆ ಪ್ರಕರಣ: ತನಿಖೆ ತೀವ್ರಗೊಳಿಸಿದ ಪೊಲೀಸರು

ಮೈಸೂರು: ಮೈಸೂರು ತಾಲ್ಲೂಕಿನ ಹೊರವಲಯದಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ತಾಲೂಕಿನ ಹಾರೋಹಳ್ಳಿ ಹೊರಭಾಗದಲ್ಲಿರುವ ಹುನಗನಹಳ್ಳಿ ಗ್ರಾಮದ ಅಂಚಿನಲ್ಲಿರುವ ಸ್ವಾಮಿ ಅವರ ಐಷಾರಾಮಿ ಬಂಗಲೆ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಹಲವಾರು ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಆದರೆ, ದಾಳಿಯ ಸಂದರ್ಭದಲ್ಲಿ ಭ್ರೂಣ ಹತ್ಯೆಗೆ ಬಳಸುವಂತಹ ಯಂತ್ರೋಪಕರಣಗಳು ಪತ್ತೆಯಾಗಿಲ್ಲದಿರುವ ಕಾರಣ ಪೊಲೀಸರು ಬೇರೆ ಬೇರೆ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಪ್ರಕರಣದ ಆರೋಪಿಗಳಾದ ಶ್ಯಾಮಲಾ, ಈಕೆಯ ಸಹೋದರ ಗೋವಿಂದರಾಜು, ಕೆ.ಆರ್.ನಗರ ತಾಲೂಕಿನ ಭೇರ್ಯ ಹರೀಶ್ ನಾಯಕ್, ಕೆ.ಸಾಲುಂಡಿಯ ಶಿವಕುಮಾರ್ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ಕೆಲವು ಮಹತ್ವ ಮಾಹಿತಿ ಲಭ್ಯವಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದ ಆರೋಪಿಗಳಾದ ಮೈಸೂರಿನ ಸ್ವಾಮಿ, ಶ್ಯಾಮಲಾ ಪತಿ ಕಾರ್ತಿಕ್, ಪುಟ್ಟರಾಜು ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಈಗ ಸಿಕ್ಕಿಬಿದ್ದಿರುವ ಹಾಗೂ ತಲೆಮರೆಸಿಕೊಂಡಿರುವ ಆರೋಪಿಗಳ ಜೊತೆಗೆ ಬೇರೆಯವರ ನಂಟು, ಸಂಪರ್ಕ ಇರುವುದು, ಯಾರ್ಯಾರು ಕರೆ ಮಾಡುತ್ತಿದ್ದರು ಮತ್ತು ಯಾರ್ಯಾರನ್ನು ಸಂಪರ್ಕ ಮಾಡಿದ್ದಾರೆಂಬುದನ್ನು ಪತ್ತೆ ಮಾಡಲು ಸಿಡಿಆರ್ ಮೂಲಕ ನಂಬರ್ ಪತ್ತೆ ಹಚ್ಚಲಾಗುತ್ತಿದೆ ಎಂದು ಅಡಿಷನಲ್ ಎಸ್ಪಿ ಮಲ್ಲಿಕ್ ಮಾಹಿತಿ ನೀಡಿದ್ದಾರೆ.







