ಉದಯಗಿರಿ ಕಲ್ಲುತೂರಾಟ ಪ್ರಕರಣ ; ಪ್ರತಾಪ್ ಸಿಂಹ ವಿರುದ್ಧ ಯುವ ಕಾಂಗ್ರೆಸ್ ದೂರು

ಮೈಸೂರು: ಉದಯಗಿರಿ ಗಲಾಟೆಯ ಮೂಲ ಕಾರಣಕರ್ತರಾದ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ್ ಉದಯಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಅವರ ಸಹಚರ ಹಾಗೂ ಆರೆಸ್ಸೆಸ್ ಮುಖಂಡ ಸುರೇಶ್ ಅಲಿಯಾಸ್ ಪಾಂಡುರಂಗ ಅವರಿಗೆ ಕುಮ್ಮಕ್ಕು ನೀಡಿ ವಾಟ್ಸ್ ಅಪ್‌ನಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗು ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರ ಭಾವಚಿತ್ರಕ್ಕೆ ಮುಸಲ್ಮಾನ ಧರ್ಮಗುರುಗಳ ಹೆಸರುಗಳನ್ನು ಬಳಕೆ ಮಾಡಿ ಪ್ರಚೋದನಕಾರಿ ಪೋಸ್ಟ್ ಅನ್ನು ಮಾಡಿಸಿ, ಶಾಂತಿ ನೆಮ್ಮದಿಯಿಂದ ಇರುವ ಮೈಸೂರನ್ನು ಸುರೇಶ್ ಅಲಿಯಾಸ್ ಪಾಂಡುರಂಗ ಎನ್ನುವ ಪುಂಡನ ಮುಖಾಂತರ ಗಲಭೆಗೆ ಕಾರಣಕರ್ತರಾಗಿರುತ್ತಾರೆ. ಘಟನೆ ನಡೆದ ಮಾರನೇ ದಿನ ಪ್ರತಾಪ್ ಸಿಂಹ ಅವರು ಉದಯಗಿರಿ ಪೊಲೀಸ್ ಠಾಣೆಗೆ ಬಂದು ಮುಖ್ಯಮಂತ್ರಿಗಳು ಹಾಗೂ ಮುಸಲ್ಮಾನರ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಒಂದು ಧರ್ಮಕ್ಕೆ ದಕ್ಕೆಯನ್ನುಂಟು ಮಾಡಿ ಗಲಭೆಯ ರೂವಾರಿಯಾಗಿರುತ್ತಾರೆ.
ಈ ಎಲ್ಲಾ ವಿಚಾರಗಳನ್ನು ಪರಿಗಣಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಮೇಲೆ ದೂರನ್ನು ದಾಖಲಿಸಬೇಕು ಹಾಗೂ ಉದಯಗಿರಿ ಗಲಭೆಯ ಮೂಲ ಕಾರಣಕರ್ತನಾದ ಪ್ರತಾಪ್ ಸಿಂಹ ಅವರ ಮೇಲೆ ಸೂಕ್ತ ಕಾನೂನು ಕ್ರಮವನ್ನು ಜರುಗಿಸಬೇಕೆಂದು ದೂರು ನೀಡಿದ್ದಾರೆ.





