ಮುಂದಿನ ನಾಲ್ಕು ತಿಂಗಳಲ್ಲಿ ʼಗ್ರೇಟರ್ ಬೆಂಗಳೂರುʼ ಚುನಾವಣೆಗೆ ಸಿದ್ಧತೆ : ಡಿಸಿಎಂ ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್
ಮೈಸೂರು : ಮುಂದಿನ ನಾಲ್ಕು ತಿಂಗಳಲ್ಲಿ ಗ್ರೇಟರ್ ಬೆಂಗಳೂರು ಚುನಾವಣೆಗೆ ಸಿದ್ಧತೆ ನಡೆಸಲಾಗುವುದು. ಮೊದಲು ಮೀಸಲಾತಿ ಹಾಗೂ ವಲಯವಾರು ವಿಭಾಗಗಳನ್ನು ರಚಿಸಲಾಗುವುದು. ನಂತರ ಚುನಾವಣೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ ದೊರಕಿದ್ದು, ಈ ಬಗ್ಗೆ ಸರ್ವಪಕ್ಷ ಸಭೆ ನಡೆಸಲಾಗುವುದು. ಯಾವ ರೀತಿ ವಿಭಾಗಗಳನ್ನು ಮಾಡಬೇಕು ಎಂದು ಅವರ ಬಳಿಯೂ ಸಲಹೆ ಕೇಳಲಾಗುವುದು. ಸದನದಲ್ಲಿಈ ಬಗ್ಗೆ ಎಲ್ಲರೂ ತಮ್ಮ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಕ್ಯಾಬಿನೆಟ್ ಉಪ ಸಮಿತಿ ರಚನೆ ಮಾಡಲಾಗಿತ್ತು. ಅವರ ಶೇ.90ರಷ್ಟು ಅಭಿಪ್ರಾಯಗಳನ್ನು ಪರಿಗಣಿಸಲಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಚುನಾವಣೆ ನಡೆಸಲಾಗುವುದು. ಹೊಸ ಪ್ರದೇಶಗಳನ್ನು ಸೇರಿಸಲು ವಿಳಂಬವಾಗುತ್ತದೆ. ಈಗ ಹೇಗಿದೆಯೋ ಅದೇ ರೀತಿ ಮುಂದುವರೆಯಲಾಗುವುದು ಎಂದು ತಿಳಿಸಿದರು.
ವಿಪಕ್ಷ ನಾಯಕ ಆರ್.ಅಶೋಕ್ ಅವರು ಇದನ್ನು ಕ್ವಾರ್ಟರ್ ಬೆಂಗಳೂರು ಎಂದು ಲೇವಡಿ ಮಾಡಿರುವ ಬಗ್ಗೆ ಕೇಳಿದಾಗ, “ಈ ವಿಧೇಯಕವು ಮೊದಲಿಗೆ ಬಂದಾಗಲೇ ವಿರೋಧ ವ್ಯಕ್ತಪಡಿಸಬೇಕಿತ್ತು. ಸದನದಲ್ಲೇಕೆ ಜಾರಿಗೆ ತರಲು ಒಪ್ಪಿಗೆ ಸೂಚಿಸಿದರು. ಅವರು ಕ್ವಾರ್ಟರ್ ಬೆಂಗಳೂರು, ಫುಲ್ ಬೆಂಗಳೂರು ಎಂದು ಏನಾದರೂ ಹೇಳಲಿ, ಆದರೆ ಅವರು ಏಕೆ ಸದನದಲ್ಲಿ ಸಲಹೆಗಳನ್ನು ನೀಡಿದರು. ವಿರೋಧ ಪಕ್ಷದವರು ಅಷ್ಟು ಮಾತನಾಡಲಿಲ್ಲ ಎಂದರೆ, ಗೌರವ ಕಡಿಮೆ ಅಲ್ಲವೇ? ಹೀಗಾಗಿ ಮಾತನಾಡುತ್ತಿದ್ದಾರೆ. ಅವರು ಬೆಂಗಳೂರಿನ ಒಂದು ಭಾಗ. ಅವರಿಗೆ ಏನು ಗೌರವ ನೀಡಲಾಗುವುದೋ ಅದನ್ನು ನಾವು ನೀಡುತ್ತೇವೆ” ಎಂದರು.
ಕಬಿನಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ರೆಸಾರ್ಟ್ ಗಳ ಬಗ್ಗೆ ಕೇಳಿದಾಗ, “ಈ ಬಗ್ಗೆ ಪಟ್ಟಿ ಮಾಡಿ ನನಗೆ ನೀಡಿ, ಇದರ ಬಗ್ಗೆ ಚರ್ಚೆ ನಡೆಸಲಾಗುವುದು” ಎಂದರು.







