ಅರಣ್ಯ ಇಲಾಖೆ ನಿರ್ಲಕ್ಷ್ಯ ಖಂಡಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ

ಮೈಸೂರು: ಅರಣ್ಯ ಇಲಾಖೆಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನವನ್ನು ವಿರೋಧಿಸಿ ವಾಟಾಳ್ ನಾಗರಾಜ್ ರವರ ನೇತೃತ್ವದಲ್ಲಿ ಮೈಸೂರಿನ ಆರ್ ಗೇಟ್ ಬಳಿ ರವಿವಾರ ಪ್ರತಿಭಟನೆ ನಡೆಸಲಾಯಿತು.
ಆರಣ್ಯ ಇಲಾಖೆಯವರ ಬೇಜವಾಬ್ದಾರಿಯಿಂದ ಆನೆಗಳನ್ನು ರಕ್ಷಣೆ ಮಾಡಲು ಆಗುತ್ತಿಲ್ಲ. ಮೈಸೂರು ಜಿಲ್ಲೆಯಲ್ಲಿ ಹುಲಿ ಹಾಗೂ ಹುಲಿ ಮರಿಗಳು ಸಾವನ್ನಪ್ಪುತ್ತಿವೆ. ಜನರ ಮೇಲೆ ಹುಲಿಗಳು ದಾಳಿ ನಡೆಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ 18ರಿಂದ 20 ಜಿಂಕೆಗಳು ಸಾವಿಗೀಡಾಗಿವೆ. ಇದಕ್ಕೆ ಯಾರು ಕಾರಣ? ಯಾರು ಜವಾಬ್ದಾರಿ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಈ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಅರಣ್ಯ ರಕ್ಷಣೆ ಮಾಡದಿದ್ದರೆ ನಾವುಗಳು ಉಳಿಯುವುದಿಲ್ಲ. ಅರಣ್ಯವನ್ನು ಲೂಟಿ ಮಾಡಲಾಗುತ್ತಿದೆ. ಕೇರಳ ಭಾಗದಲ್ಲಿ ಮರಗಳನ್ನು ಕಳ್ಳತನ ಮಾಡಲಾಗುತ್ತಿದೆ. ಇತ್ತೀಚೆಗೆ ಅರಣ್ಯದಲ್ಲಿ ಕಾರು ಸಂಚರಿಸಿ ಕಾರಿನಲ್ಲಿ ಪಿಸ್ತೂಲ್ ಸಿಕ್ಕಿತ್ತು. ಆ ಪಿಸ್ತೂಲ್ ಯಾರದು ಎಂಬುದರ ಬಗ್ಗೆ ತನಿಖೆಯೇ ಆಗಲಿಲ್ಲ. ಹೀಗಾದರೆ ಅರಣ್ಯ ಉಳಿಯಲುವ ಸಾಧ್ಯವೇ ಎಂದು ಪ್ರಶ್ನಿಸಿದರು.
ವನ್ಯ ಪ್ರಾಣಿಗಳು ನಾಡಿಗೆ ಬಂದು ಮನುಷ್ಯನ ಮೇಲೆ ದಾಳಿ ಮಾಡುತ್ತಿವೆ. ಇದಕ್ಕೆ ಕಾರಣ ಏನು ಎಂದು ಪತ್ತೆ ಹಚ್ಚಲಿಲ್ಲ. ಎಷ್ಟೇ ಹಣ ಖರ್ಚಾದರು ಕಾಡಿನ ಸುತ್ತಾ ಬೇಲಿ ಹಾಕಬೇಕು ಎಂದು ಒತ್ತಾಯಿಸಿದರು.
ವನ್ಯಜೀವಿ-ಪ್ರಾಣಿ ಸಂಘರ್ಷದಿಂದ ಸಾವೀಗೀಡಾದವರಿಗೆ ರಾಜ್ಯ ಸರ್ಕಾರ ಬರಿ 25 ಲಕ್ಷ ರೂ. ನೀಡಲಾಗುತ್ತಿದೆ. ಇದು ಏನೇನು ಸಾಲದು. ಹಾಗಾಗಿ ಈ ಪರಿಹಾರ ಮೊತ್ತವನ್ನು 50 ಲಕ್ಷ ರೂ. ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕನ್ನಡ ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ, ಬಿ.ಎ.ಶಿವಶಂಕರ್, ಜಿಯಾ ನಾಸಿರ್, ತೇಜಸ್ ಲೋಕೇಶ್ ಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.







