ಮೈಸೂರು ದಸರಾದಲ್ಲಿ ಕಂಬಳ ಕ್ರೀಡೆ ಆಯೋಜನೆ ವಿರೋಧಿಸಿ ಪ್ರತಿಭಟನೆ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನಲ್ಲಿ ಕಂಬಳ ಕ್ರೀಡೆ ಆಯೋಜಿಸಲು ರಾಜ್ಯ ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ಕಂಬಳ ಕ್ರೀಡೆಯ ಆಯೋಜನೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಪರಿಸರವಾದಿಗಳು, ರೈತ ಸಂಘಟನೆಗಳು, ಕನ್ನಡಪರ ಹಾಗೂ ಪ್ರಗತಿಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಹೊರ ವರ್ತುಲ ರಸ್ತೆಯಲ್ಲಿ ಕಂಬಳ ಕ್ರೀಡೆ ಆಯೋಜಿಸಲು ನಿರ್ಧರಿ ಸ್ವಚ್ಛಗೊಳಿಸಿರುವ ಸ್ಥಳದಲ್ಲಿ ಶನಿವಾರ ಪರಿಸರಕ್ಕಾಗಿ ನಾವು ಸಂಘಟನೆ, ಕರ್ನಾಟಕ ರಾಜ್ಯ ರೈತ ಸಂಘ, ಕೆಆರ್‌ಎಸ್ ಪಕ್ಷ, ಟೀಮ್ ಮೈಸೂರು, ಭೂಮಿತಾಯಿ ಹೋರಾಟ ಸಮಿತಿ, ದಲಿತ ಸಂಘರ್ಷ ಸಮಿತಿ, ಕನ್ನಡಪರ ಸಮಘಟನೆಗಳು ಸೇರಿದಂತೆ ಹಲವು ಸಂಘಟನೆಗಳ ನೇತೃತ್ವದಲ್ಲಿ ನಡೆದ ಸಾಂಕೇತಿಕ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಲಾಯಿತು. ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಪರಿಸರಕ್ಕಾಗಿ ನಾವು ಸಂಘಟನೆಯ ರಾಜ್ಯಾಧ್ಯಕ್ಷರೂ ಆದ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ದಸರಾ ನಮ್ಮ ನಾಡಿನ ಸಂಸ್ಕೃತಿ, ಪರಂಪರೆ ಮತ್ತು ಧಾರ್ಮಿಕ ನಂಬಿಕೆಗಳ ಪ್ರತೀಕ. ಚಾಮುಂಡಿ ತಾಯಿಯ ಆಶೀರ್ವಾದದೊಂದಿಗೆ ನಡೆಯುವ ಈ ಮಹೋತ್ಸವದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು. ಆದರೆ ಸಾಂಸ್ಕೃತಿಕ ಕಾರ್ಯಕ್ರಮಗಳ ಹೆಸರಿನಲ್ಲಿ ಪರಿಸರಕ್ಕೆ ಹಾನಿಯಾಗುವ ಕಾರ್ಯಕ್ರಮಗಳನ್ನಲ್ಲ ಎಂದು ಹೇಳಿದರು.
ರಾಜ್ಯದಾದ್ಯಂತ ನೀರಿನ ಕೊರತೆ ಮತ್ತು ಬರಗಾಲದ ಪರಿಸ್ಥಿತಿ ಉಂಟಾಗಿರುವ ಸಂದರ್ಭದಲ್ಲಿ ಕಂಬಳ ಆಯೋಜನೆಗೆ ಮುಂದಾಗಿರುವುದು ಖಂಡನೀಯ. ಈ ಶತಮಾನದಲ್ಲೇ ಕಾಣದಂತಹ ಭೀಕರ ಬರ ಪರಿಸ್ಥಿತಿ ಎದುರಾಗಿದೆ. ರೈತರು ಬೆಳೆ ಬೆಳೆಯಲು ನೀರಿಲ್ಲದೆ ಪರದಾಡುತ್ತಿದ್ದಾರೆ. ಒಂದು ಹನಿ ನೀರನ್ನು ಕೂಡ ವ್ಯರ್ಥ ಮಾಡಬೇಡಿ ಎಂದು ಸರ್ಕಾರವೇ ಜನರಿಗೆ ಸಂದೇಶ ನೀಡುತ್ತಿದೆ. ಆದರೆ ಮತ್ತೊಂದೆಡೆ ಲಕ್ಷಾಂತರ ಲೀಟರ್ ನೀರನ್ನು ಬಳಸಿ ಕಂಬಳ ಆಯೋಜನೆಗೆ ಮುಂದಾಗಿರುವುದು ದ್ವಂದ್ವ ನೀತಿಯಾಗಿದೆ ಎಂದು ದೂರಿದರು.
ಮುಂದಿನ ಪೀಳಿಗೆಗೆ ಸ್ವರ್ಗವಾಗಿದ್ದ ಭೂಮಿಯನ್ನು ನರಕವನ್ನಾಗಿ ಮಾಡಿ ಕೊಟ್ಟು ಹೋಗಬಾರದು. ಪ್ರಕೃತಿ ಮತ್ತು ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ನಾಶ ಮಾಡಿದ ಪರಿಣಾಮವೇ ಇಂದು ಹವಾವಾನ ವೈಪರೀತ್ಯ, ಮಳೆ ಕೊರತೆ ಮತ್ತು ಬರಗಾಲದ ರೂಪದಲ್ಲಿ ಕಾಣಿಸುತ್ತಿದೆ ಎಂದು ಹೇಳಿದರು.
ಒಂದು ಮರವನ್ನು ಕಡಿುುಂವುದಕ್ಕೂ ನೂರಾರು ಬಾರಿ ಯೋಚಿಸಬೇಕಾದ ಪರಿಸ್ಥಿತಿ ಇದೆ. ಆದರೆ ಇಲ್ಲಿ ಮರಗಳನ್ನು ಕಡಿದು ಪರಿಸರಕ್ಕೆ ಹಾನಿ ಮಾಡಲಾಗಿದೆ. ಅಕ್ರಮವಾಗಿ ಮರಗಳನ್ನು ಕಡಿದಿದ್ದಾರೆ ಎಂದು ಹೇಳುವುದಷ್ಟೇ ಸಾಲದು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಕಂಬಳ ಮೈಸೂರಿನ ಸಂಸ್ಕೃತಿಯಲ್ಲ:
ದಲಿತ ಸಂಘರ್ಷ ಸಮಿತಿಯ ಮುಖಂಡ ಬೆಟ್ಟಯ್ಯ ಕೋಟೆ ಮಾತನಾಡಿ, ಕಂಬಳ ಕರಾವಳಿ ಮತ್ತು ಮಲೆನಾಡು ಭಾಗದ ಸಾಂಸ್ಕೃತಿಕ ಕ್ರೀಡೆ. ಅದನ್ನು ಮೈಸೂರಿಗೆ ತಂದು ಪರಿಚಯಿಸುವುದು ಅಗತ್ಯವಿಲ್ಲ. ಪ್ರಕೃತಿಯೊಂದಿಗೆ ಹೊಂದಾಣಿಕೆಯಿಂದ ಬದುಕಬೇಕಾದ ಸರ್ಕಾರವೇ ಇಂದು ಪ್ರಕೃತಿಯ ವ್ಯಾಪಾರೀಕರಣಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.
ಮೈಸೂರು ಭಾಗ ಈಗಾಗಲೇ ಬರಗಾಲದ ಸಂಕಷ್ಟ ಎದುರಿಸುತ್ತಿದೆ. ರೈತರು ಮತ್ತು ಕೃಷಿ ಕಾರ್ಮಿಕರು ಬದುಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ಬದುಕಿಗೆ ನೆರವಾಗುವ ಯೋಜನೆಗಳನ್ನು ಘೋಷಿಸಬೇಕಾದ ಸರ್ಕಾರ, ಕಂಬಳದಂತಹ ಕಾರ್ಯಕ್ರಮಗಳಿಗೆ ಆದ್ಯತೆ ನೀಡುತ್ತಿರುವುದು ಖಂಡನೀಯ ಎಂದರು.
ನೀರಾವರಿ ತಜ್ಞ ಯು.ಎನ್. ರವಿಕುಮಾರ್ ಮಾತನಾಡಿ, ಕಂಬಳವು ದಕ್ಷಿಣ ಕನ್ನಡ ಮತ್ತು ಕರಾವಳಿ ಭಾಗದ ಜೀವನಶೈಲಿ, ಕೃಷಿ ಸಂಸ್ಕೃತಿ ಮತ್ತು ಹವಾಮಾನದೊಂದಿಗೆ ಬೆಸೆದುಕೊಂಡಿರುವ ಕ್ರೀಡೆ. ಸುಪ್ರೀಂ ಕೋರ್ಟ್ ಕೂಡ ಅದನ್ನು ಆ ಭಾಗದ ಸಾಂಸ್ಕೃತಿಕ ಪರಂಪರೆಯ ಭಾಗವೆಂದು ಪರಿಗಣಿಸಿದೆ. ಆದರೆ ಅದನ್ನು ಬೇರೆ ಪ್ರದೇಶಗಳಿಗೆ ವಿಸ್ತರಿಸಿ ವ್ಯಾಪಾರೀಕರಣ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಕರಾವಳಿ ಭಾಗದಲ್ಲಿ ಕಂಬಳ ನಡೆಯಲಿ, ಅದರ ಸಂಸ್ಕೃತಿಯನ್ನು ನಾವು ಗೌರವಿಸುತ್ತೇವೆ. ಆದರೆ ಮೈಸೂರಿನ ಪರಿಸರ, ನೀರಿನ ಪರಿಸ್ಥಿತಿ ಮತ್ತು ಜನರ ಅಭಿಪ್ರಾಯವನ್ನು ಕಡೆಗಣಿಸಿ ಇಲ್ಲಿ ಕಂಬಳ ಆಯೋಜಿಸುವುದು ಸರಿಯಲ್ಲ ಎಂದು ಹೇಳಿದರು.
ಸಭೆಯಲ್ಲಿ ಆರು ನಿರ್ಣಯ ಮಂಡನೆ:
ಪ್ರತಿಭಟನಾ ಸಭೆ ಬಳಿಕ ಜಂಟಿ ಕ್ರಿಯಾ ಸಮಿತಿ ಆರು ಪ್ರಮುಖ ನಿರ್ಣಯಗಳನ್ನು ಕೈಗೊಂಡಿತು. ‘ಪರಿಸರಕ್ಕಾಗಿ ನಾವು’ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ವಾಚಿಸಿ ಸಭೆಯ ಗಮನಕ್ಕೆ ತಂದರು.
ಕರಾವಳಿ ಭಾಗದ ಜನಪ್ರಿಯಗ್ರಾಮೀಣ ಕ್ರೀಡೆಯಾದ ಕಂಬಳದ ಬಗ್ಗೆ ಗೌರವವಿದ್ದರೂ, ಮೈಸೂರು ದಸರಾದಲ್ಲಿ ಕಂಬಳ ಕ್ರೀಡೆ ಆಯೋಜಿಸಬಾರದು. ಈಗಾಗಲೇ ದಸರಾ ಮಹೋತ್ಸವದಲ್ಲಿ ಆಯೋಜಿಸಲಾಗುತ್ತಿರುವ ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಸಬೇಕು.
ಪಾಸ್ ವಿತರಣೆ ಸೇರಿದಂತೆ ದಸರಾದ ಎಲ್ಲಾ ಆಡಳಿತಾತ್ಮಕ ಚಟುವಟಿಕೆಗಳು ಪಾರದರ್ಶಕವಾಗಿ ನಡೆಯಬೇಕು. ಸ್ಥಳೀಯ ಕಲೆಗಳು ಮತ್ತು ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.
ಸ್ಥಳೀಯ ಕಲಾವಿದರಿಗೆ ಗೌರವಯುತ ಸಂಭಾವನೆ ನೀಡುವುದರ ಜೊತೆಗೆ ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಬರಗಾಲದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರ ಅಗತ್ಯ ಪರಿಹಾರ ಮತ್ತು ನೆರವು ನೀಡಬೇಕು.
ಲಡಾಖ್‌ನ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಕಳೆದ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡಲೇ ಅವರೊಂದಿಗೆ ಮಾತುಕತೆ ನಡೆಸಿ, ಪ್ರಜಾಪ್ರಭುತ್ವದ ಸಂವಾದದ ಮೂಲಕ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮೇಜರ್ ಜನರಲ್ (ನಿ) ಒಂಬತ್ಕೆರೆ, ಬಡಗಲಪುರ ನಾಗೇಂದ್ರ, ಪ್ರೊ.ಎನ್.ಎಸ್.ರಂಗರಾಜು, ಬಾನು ಮೋಹನ್, ಪ್ರೊ ಕಾಳಚನ್ನೇಗೌಡ, ಸಂಸ್ಕೃತಿ ಚಿಂತಕ ಮ.ಗು.ಸದಾನಂದಯ್ಯ, ರವಿ ಬಳೆ, ಬಾನು ಪ್ರಶಾಂತ್, ಪ್ರೊ.ಮೈಸೂರ್ ಜನಾರ್ಧನ, ಪ್ರಭಾ ನಂದೀಶ, ಲೀಲಾ ಶಿವಕುಮಾರ್, ಕೆ.ಜಿ.ಗುರುಸ್ವಾಮಿ, ಅಂಜನಾ, ಓಂ ಶಿವ ಚರಣ್, ಗಣೇಶ, ಪಟ್ನ ವೆ ರಾಮು ಜೀ, ಸಿ.ರವಿ ಪ್ರಸಾದ್, ಐಶ್ವರ್ಯ ವಿ. ಶ್ರೀಧರ್, ತೇಜಸ್, ಹೊರೆಯಾಲ ದೊರೆಸ್ವಾಮಿ, ಸಾರ್ಥಕ್, ಮಹಾಂತೇಶ, ಸುಶ್ರೀತ್, ತೇಜಸ್ವಿ, ಪವನ್, ಗಾಯತ್ರಿ, ಶಶಿಕಲಾ ಚರಣ್, ಚೇತನ್, ಸೃಷ್ಟಿ, ರಾಜೇಶ್, ರಾಕೇಶ್, ಇಂದಿರಾ, ಜಯಲಕ್ಷ್ಮೀ ಪಿ.ಗೌಡ, ಸುಲೋಚನ, ಲಕ್ಷ್ಮಣ್, ಗಂಟಯ್ಯ, ಸುಶೀಲ, ಸುಶ್ಮಿತಾ, ಪ್ರೊ.ನಭಿಜಾನ್, ರಾಮಸ್ವಾಮಿ, ಗೀತಾಂಜಲಿ,ರವಿಕಿರಣ್ ಕಿರಣ್, ಶಶಿಕಲಾ, ಮಲ್ಲಮ್ಮ ಗಾಣಿಗ, ಕರ್ನಾಟಕ ರಾಜ್ಯ ರೈತ ಸಂಘದ ಮೈಸೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ಹೊಸೂರು ಕುಮಾರ್, ದಲಿತ ಸಂಘರ್ಷ ಸಮಿತಿಯ ಸಂಚಾಲಕ ಶಂಭುಲಿಂಗಸ್ವಾಮಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಉಪಾಧ್ಯಕ್ಷ ಕೆ.ಎಸ್.ಸೋಮ ಸುಂದರ್, ಕಾರ್ಯನಿರ್ವಹಣಾ ಸದಸ್ಯ ಎಸ್.ನಾಗೇಂದ್ರ, ನಗರ ಘಟಕದ ಅಧ್ಯಕ್ಷ ನಾಗರಾಜ್, ಗ್ರಾಮಾಂತರ ಅಧ್ಯಕ್ಷ ಹರೀಶ್, ಮೈಸೂರು ಪ್ರಧಾನ ಕಾರ್ಯದರ್ಶಿ ಹರೀಶ್, ನಗರ ಘಟಕದ ಅಧ್ಯಕ್ಷ ರವಿ ಗೌಡ, ನಗರದ ಉಪಾಧ್ಯಕ್ಷ ಆನಂದ್, ನಗರ ಘಟಕದ ಮಹಿಳಾ ಅಧ್ಯಕ್ಷರಾದ ನಾಗಲಕ್ಷ್ಮೀ ಇನ್ನಿತರರು ಹಾಜರಿದ್ದರು.
ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಬರಗಾಲ ಸಂಭವಿಸಿ ರಾಜ್ಯಕ್ಕೆ ಸಂಕಷ್ಟ ಎದುರಾಗಲಿದೆ. ನೀರಿನ ಕೊರತೆಯಿಂದ ರೈತರು ಬೆಳೆಗಳ ನಾಶವಾಗಲಿವೆ. ಕುಡಿಯುವ ನೀರಿಗೆ ಹಾಹಾಕಾರವಾಗಲಿದೆ. ಕಾವೇರಿ ನದಿ ನೀರಿನ ವಿಚಾರದಲ್ಲಿ ತಮಿಳುನಾಡು-ಕರ್ನಾಟಕದಲ್ಲಿ ಸಂಘರ್ಷಕ್ಕೆ ನಡೆಯುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಹಣವನ್ನು ದುಂದುವೆಚ್ಚ ಮಾಡುವ ಬದಲು ಸರಳ ದಸರಾ ಆಚರಿಸಿ ರಾಜ್ಯದ ಜನತೆಗೆ ನೆರವಾಗುವ ಕೆಲಸ ಮಾಡಲಿ.
-ಬಡಗಲಪುರ ನಾಗೇಂದ್ರ, ರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ.
ವಿಜಯನಗರ ಕಾಲದಿಂದಲೂ ನಡೆದು ಬಂದಿರುವ ದಸರಾ ಮಹೋತ್ಸವದಲ್ಲಿ ಯಾವ ಸಂದರ್ಭದಲ್ಲಿಯೂ ಕಂಬಳ ಕ್ರೀಡೆಯನ್ನು ನಡೆಸಿಲ್ಲ. ಹೀಗಾಗಿ ಹೊಸ ಸಂಪ್ರದಾಯವನ್ನು ದಸರಾ ಸಂಸ್ಕೃತಿ ಎಂದು ಬಿಂಬಿಸಬಾರದು. ಮಂಗಳೂರಿನಲ್ಲಿ ಕಂಬಳ ಆಯೋಜಿಸಲಿ. ನಾವು ಅಲ್ಲಿಯೇ ನೋಡುತ್ತೇವೆ. ಆದರೆ, ದಸರೆಯಲ್ಲಿ ಬೇಡ.
- ಪ್ರೊ.ಎನ್.ಎಸ್.ರಂಗರಾಜು, ಪಾರಂಪರಿಕ ತಜ್ಞ.
ಕಂಬಳ ಆಯೋಜನೆಗೆ ಸರ್ಕಾರ ನಿಗದಿಪಡಿಸುವ ಸ್ಥಳದಲ್ಲಿ ನೂರಾರು ಮರಗಳಿವೆ. ಈ ಮರಗಳನ್ನು ನಂಬಿ ಸಾವಿರಾರು ಪಕ್ಷಿಗಳಿವೆ. ಇಂತಹ ಸ್ಥಳದಲ್ಲಿ ಕಂಬಳ ಕ್ರೀಡೆ ಆಯೋಜಿಸುವ ನಿರ್ಧಾರ ಖಂಡನೀಯ. ಪರಿಸರ ನಾಶ ಪಡಿಸಿ ಕ್ರೀಡೆಯ ಮೂಲಕ ಸಂಭ್ರಮ ಪಡುವ ಅಗತ್ಯ ನಾಗರಿಕ ಸಮಾಜಕ್ಕಿಲ್ಲ. ಕಂಬಳ ಕೈ ಬಿಡದಿದ್ದರೆ ಹೋರಾಟ ತೀವ್ರಗೊಳ್ಳಲಿದೆ.
- ಭಾನು ಮೋಹನ್, ಪರಿಸರವಾದಿ.






