ʼಗೌರವ ಡಾಕ್ಟರೇಟ್ʼ ಬೇಡವೆಂದ ಸಚಿವ ಸತೀಶ್ ಜಾರಕಿಹೊಳಿ : ಕೆ.ಎಸ್.ಒ.ಯು ವಿವಿಗೆ ಪತ್ರ

ಸತೀಶ್ ಜಾರಕಿಹೊಳಿ
ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರಸಕ್ತ ವರ್ಷದಲ್ಲಿ ಸಮಾಜ ಸೇವೆ ವಿಭಾಗದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ನೀಡಿದ್ದ ಡಾಕ್ಟರೇಟ್ ಅನ್ನು ಸಚಿವ ಸತೀಶ್ ಜಾರಕಿಹೊಳಿ ಸ್ವೀಕರಿಸದೆ ನಿರಾಕರಿಸಿದ್ದಾರೆ.
ಈ ಸಂಬಂಧ ಕೆ.ಎಸ್.ಒ.ಯು ಕುಲಪತಿಗಳಿಗೆ ಪತ್ರ ಬರೆದಿರುವ ಅವರು ಸಮಾಜದಲ್ಲಿ ಮಾಡಬೇಕಾದ ಕೆಲಸ ಸಾಕಷ್ಟಿವೆ, ಹೀಗಾಗಿ ಡಾಕ್ಟರೇಟ್ ಪದವಿ ವಾಪಸ್ ಪಡೆಯಿರಿ ಎಂದು ಮನವಿ ಮಾಡಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಬರೆದ ಪತ್ರದ ವಿವರ:
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಾಧಿಪತಿ, ಸಮಕುಲಾಧಿಪತಿ, ಕುಲಪತಿ ಮತ್ತು ವ್ಯವಸ್ಥಾಪನ ಮಂಡಳಿ ಸದಸ್ಯರ ವತಿಯಿಂದ ಮಾ.27ರಂದು ನನಗೆ ವಿಶ್ವವಿದ್ಯಾನಿಲಯದ ʼಗೌರವ ಡಾಕ್ಟರೇಟ್ʼ ಪದವಿಯನ್ನು ನೀಡುವುದರ ಮೂಲಕ ಸನ್ಮಾನಿಸಿದ ತಮಗೆ ಹಾಗೂ ವ್ಯವಸ್ಥಾಪನ ಮಂಡಳಿಗೆ ನಾನು ಹೃತ್ತೂರ್ವಕವಾಗಿ ಆಭಾರಿಯಾಗಿದ್ದೇನೆ.
ಈ ಗೌರವ ಡಾಕ್ಟರೇಟ್ ಪದವಿಯನ್ನು ನನಗೆ ಪ್ರಧಾನಿಸುವ ಮೂಲಕ ತಾವು ಸಮಾಜದಲ್ಲಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿರುತ್ತೀರಿ. ಸಾಮಾಜಿಕ ಸೇವೆಯಲ್ಲಿ ನಾನು ಕೈಗೊಂಡಿರುವ ಕಾರ್ಯಕ್ರಮಗಳನ್ನು ಸಫಲಗೊಳಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿರುತ್ತೇನೆ. ಆದರೆ ಅದನ್ನು ಕಾರ್ಯರೂಪಕ್ಕೆ ತರುವಂತಹ ಗುರುತರವಾದಂತಹ ಹೊಣೆಗಾರಿಕೆ ನನ್ನ ಮೇಲಿದ್ದು, ಇದಕ್ಕೆ ಇನ್ನೂ ಹೆಚ್ಚಿನ ಕಾಲಾವಕಾಶದ ಅವಶ್ಯಕತೆ ಇರುತ್ತದೆ.
ಈ ಹಿನ್ನಲೆಯಲ್ಲಿ, ತಾವು ಪ್ರೀತಿಪೂರ್ವಕವಾಗಿ ತಮ್ಮ ವಿಶ್ವವಿದ್ಯಾನಿಲಯದ ವತಿಯಿಂದ ನನಗೆ ನೀಡಿದಂತಹ ಗೌರವ ಡಾಕ್ಟರೇಟ್ ಪದವಿಯನ್ನು ಹಿಂಪಡೆಯಲು ಕೋರುತ್ತೇನೆ. ಮುಂದುವರೆದಂತೆ, ನನ್ನ ಈ ನಿರ್ಧಾರವನ್ನು ಅನ್ಯಥಾ ಭಾವಿಸದೇ, ನಾನು ಮನಸೋಯಿಚ್ಚೆ ಕೈಗೊಂಡಿರುವ ನಿರ್ಧಾರವಾಗಿದ್ದು, ತಾವು ಈ ನಿರ್ಧಾರವನ್ನು ಸ್ವಾಗತಿಸುತ್ತೀರೆಂದು ಭಾವಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.