ಮೈಸೂರು ವಿವಿಯಲ್ಲಿ ಕರ್ತವ್ಯ ನಿರತ ಭದ್ರತಾ ಸಿಬ್ಬಂದಿ ಸಾವು; ಕೆಲಸದ ಒತ್ತಡ ಕಾರಣ ಎಂದು ಆರೋಪಿಸಿ ಎಐಯುಟಿಯುಸಿ ಪ್ರತಿಭಟನೆ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕರ್ತವ್ಯ ನಿರತ ಭದ್ರತಾ ಸಿಬ್ಬಂದಿ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ. ವಾರದ ರಜೆ ಕೊಡದಿರುವುದು ಮತ್ತು ಕೆಲಸದ ಒತ್ತಡದಿಂದ ಕಾರ್ಮಿಕ ಮೃತಪಟ್ಟಿದ್ದಾರೆಂದು ಆರೋಪಿಸಿ ಎಐಯುಟಿಯುಸಿ ಸಂಘಟನೆ ಸದಸ್ಯರು ಮತ್ತು ಭದ್ರತಾ ಸಿಬ್ಬಂದಿ, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಜಯನಗರದ ನಿವಾಸಿಯಾದ ಸಂಜಯ್ ಅವರು ಬುಧವಾರ ಬೆಳಗ್ಗೆ ಓರಿಯಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಕರ್ತವ್ಯಕ್ಕೆ ಹಾಜರಾದ ವೇಳೆ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಅನಾರೋಗ್ಯ ಮತ್ತು 11 ದಿನಗಳಿಂದ ವಾರದ ರಜೆ ನೀಡದಿರುವುದೇ ಸಂಜಯ್ ಅವರ ಸಾವಿಗೆ ಕಾರಣವೆಂದು ಹೋರಾಟಗಾರರು ಆರೋಪಿಸಿದರು.
ಮೈಸೂರು ವಿವಿ ಕಾರ್ಯಸೌಧದ ಎದುರು ಸಮಾವೇಶಗೊಂಡ ಹೋರಾಟಗಾರರು, ಮೈಸೂರು ವಿವಿ ಆಡಳಿತ ಮಂಡಳಿ ವಿರುದ್ಧ ವಿವಿಧ ಘೋಷಣೆ ಕೂಗಿದರು. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕು. ಬೆಂಗಳೂರು ಮೂಲದ ಎಸ್‌ಆರ್‌ಆರ್ ಭದ್ರತಾ ಏಜೆನ್ಸಿಯನ್ನು ರದ್ದುಪಡಿಸಬೇಕು ಮತ್ತು ಭದ್ರತಾ ಮೇಲ್ವಿಚಾರಕನನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಎಐಯುಟಿಯುಸಿ ಸಂಚಾಲಕ ಚಂದ್ರಶೇಖರ ಮೆಟಿ ಮಾತನಾಡಿ, 120 ಭದ್ರತಾ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಹೊಸ ಏಜೆನ್ಸಿ ಬಂದ ಬಳಿಕ 90 ಜನರಿಗೆ ಕೆಲಸ ಕೊಟ್ಟಿದೆ. ಕಳೆದ 11 ದಿನಗಳಿಂದ ರಜೆ ಕೊಟ್ಟಿಲ್ಲ. ಇದನ್ನು ಖಂಡಿಸಿ ಪ್ರತಿಭಟನೆ ಮಾಡಿದ್ದೇವೆ. ಆದರೆ, ಸಂಜಯ್ ಎಂಬ ನೌಕರ ಅನಾರೋಗ್ಯದಿಂದ ಈ ದಿನ ಮೃತಪಟ್ಟಿದ್ದಾನೆ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಹಿರಿಯ ಹೋರಾಟಗಾರ ಉಗ್ರನರಸಿಂಹೇಗೌಡ ಮಾತನಾಡಿ, ಅಧಿಕಾರಿಗಳು ಸೆಕ್ಯೂರಿಟಿ ಗಾಡ್೯ ಗಳ ದುಡ್ಡು ತಿನ್ನುತ್ತಿದ್ದಾರೆ. ದೊಡ್ಡ ಭ್ರಷ್ಟಾಚಾರ ಆಗಿದೆ. ಪ್ರತಿಷ್ಠಿತ ಮೈಸೂರು ವಿವಿ ನಿಕೃಷ್ಟವಾದ ಸ್ಥಿತಿಗೆ ತಲುಪಿರುವುದು ವಿಷಾದನೀಯ ಎಂದರು.
ಕುಲಸಚಿವೆ ಎಂ.ಕೆ. ಸವಿತಾ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ನೌಕರರ ಸಮಸ್ಯೆಗಳನ್ನು ಆಲಿಸಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಚೇತನ್ ಕುಮಾರ್ ಮೃತರ ಕುಟುಂಬಕ್ಕೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಕೊಡಿಸುವುದಾಗಿ ಭರವಸೆ ನೀಡಿದರು.
ಅಧಿಕಾರಿಗಳು ಶಾಂತ ರೀತಿಯಲ್ಲಿ ನೌಕರರ ಸಮಸ್ಯೆಗಳನ್ನು ಆಲಿಸಬೇಕು. ತಾಳ್ಮೆಯಿಂದ ಸಮಸ್ಯೆ ಕೇಳಬೇಕು ಎಂದು ಸಂಶೋಧಕರ ಸಂಘದ ವಿದ್ಯಾರ್ಥಿಗಳು ಒತ್ತಾಯಿಸಿದರು. ಈ ವೇಳೆ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು.
ಎಐಯುಟಿಯುಸಿ ಜಿಲ್ಲಾ ಸದಸ್ಯ ಹರೀಶ್, ಯಶೋಧರ ವಿ, ಸಂಧ್ಯಾ ಪಿ.ಎಸ್, ಮುದ್ದುಕೃಷ್ಣ, ಹರೀಶ್ ಎಚ್.ಎಸ್, ಶಿವಾನಂದ್, ನಾರಾಯಣ, ಪ್ರೊ.ಶಬೀರ್ ಮುಸ್ತಾಫ, ಗೌರವಾಧ್ಯಕ್ಷ ನಿಂಗರಾಜು, ಚೆನ್ನಕೇಶವಮೂರ್ತಿ, ಸಂಶೋಧಕರ ಸಂಘದ ಅಧ್ಯಕ್ಷ ವರಹಳ್ಳಿ ಆನಂದ್, ಗೌರವಾಧ್ಯಕ್ಷ ನಿಂಗರಾಜು, ಉಪಾಧ್ಯಕ್ಷ ಕೆ. ಮಲ್ಲೇಶ್, ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸಂಜಯ್ ಮುಂತಾದವರು ಭಾಗವಹಿಸಿದ್ದರು.
ನ.1ರಿಂದ ಹೊಸ ಏಜೆನ್ಸಿ ಬಂದಿದೆ. ಕಾರ್ಯಾದೇಶ ನೀಡಿ 7 ದಿನಗಳಾಗಿದೆ. ಮೈಸೂರು ವಿವಿ ವ್ಯಾಪ್ತಿಯಲ್ಲಿ 750 ಸಿಸಿಟಿವಿ ಹಾಕಿದ್ದೇವೆ. 50 ಭದ್ರತಾ ಸಿಬ್ಬಂದಿ ಅಗತ್ಯವಿದ್ದರೂ 90 ಸಿಬ್ಬಂದಿ ತೆಗೆದುಕೊಂಡಿದ್ದೇವೆ. ನೌಕರರ ಯಾವುದೇ ಸಮಸ್ಯೆಗಳಿದ್ದರೂ ಬಗೆಹರಿಸುತ್ತೇವೆ. ಮೃತ ನೌಕರನ ಕುಟುಂಬದ ಸದಸ್ಯರೊಂದಿಗೆ ಮಾತಾಡಿದ್ದೇವೆ. ಎಲ್ಲ ರೀತಿಯ ನೆರವು ನೀಡುತ್ತೇವೆ.
-ಎಂ.ಕೆ.ಸವಿತಾ, ಕುಲಸಚಿವೆ
11 ದಿನಗಳಿಂದ ರಜೆ ಕೊಡದಿರುವುದು ಕ್ರೌರ್ಯ. ಇದು ಸಹಜ ಸಾವಲ್ಲ. ವ್ಯವಸ್ಥೆ ಮಾಡಿರುವ ಕೊಲೆ. ಹೊರಗುತ್ತಿಗೆ ಜೀತ ಮತ್ತು ದುಡ್ಡು ಮಾಡುವ ದಂಧೆಯಾಗಿದೆ. ಕಾರ್ಮಿಕ ಭತ್ಯೆ, ಮೂಲ ಸೌಕರ್ಯ ವಂಚಿಸಲಾಗುತ್ತಿದೆ. ಏಜೆನ್ಸಿಯನ್ನು ರದ್ದುಪಡಿಸಬೇಕು. ಇದಕ್ಕೆ ಕಾರಣರಾದವರನ್ನು ಬಂಧಿಸಬೇಕು.
-ವರಹಳ್ಳಿ ಆನಂದ್, ಅಧ್ಯಕ್ಷರು, ಸಂಶೋಧಕರ ಸಂಘ.







