ಮೈಸೂರಿನಲ್ಲಿ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ; ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಹೇಳಿದ್ದೇನು?

ಮೈಸೂರು : ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕಾರ್ತಿಕ್‌ನನ್ನು ಗುರುವಾರ ರಾತ್ರಿ ನಮ್ಮ ಸಿಬ್ಬಂದಿ ಬಂಧಿಸಿದ್ದಾರೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು.
ಮೈಸೂರಿನಲ್ಲಿ ಶುಕ್ರವಾರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಆರೋಪಿಯನ್ನು ಬಂಧಿಸಿದ ವೇಳೆ ಆತ ಮೂಲತಃ ಸಿದ್ದಲಿಂಗಪುರದವನು ಎಂದು ಮಹಜರು ನಡೆಸಲು ಕರೆದೊಯ್ದ ವೇಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ ಆತ ಸಿಬ್ಬಂದಿಗೆ ಬಾಟಲ್ ನಲ್ಲಿ ಒಡೆದಾಗ ಸ್ಥಳದಲ್ಲಿದ್ದ ಪೊಲೀಸರು ಒಮ್ಮೆ ಗಾಳಿಯಲ್ಲಿ ಗುಂಡು ಹಾರಿಸಿ ತಪ್ಪಿಸಿಕೊಳ್ಳದಂತೆ ಎಚ್ಚರಿಸಿದ್ದಾರೆ. ಇದಾಗಿಯೂ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಆಗ ಆತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಹೇಳಿದರು.
ಕಾರ್ತಿಕ್ ಎಂಬ ಆರೋಪಿ 2 ವರ್ಷದಿಂದ ಸಿದ್ದಲಿಂಗಪುರದಲ್ಲಿ ಕಾಣಿಸಿಕೊಂಡಿಲ್ಲ. ಈತನ ಮೇಲೆ 2023ರಲ್ಲಿ ಮೇಟಗಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪಕ್ಕದ ಮನೆಯವರೊಟ್ಟಿಗೆ ಜಗಳ ನಡೆದು ಬಳಿಕ ರಾಜಿಯಾಗಿರುತ್ತದೆ. ಇದಕ್ಕೂ ಮುನ್ನ 2019ರಲ್ಲಿ ಕೊಳ್ಳೇಗಾಲದಲ್ಲಿ ಮಹಿಳೆಗೆ ಲೈಗಿಂಕ ಕಿರುಕುಳ ನೀಡಿದ ಆರೋಪದಡಿಯಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಹೊರ ಬಂದಿರುತ್ತಾನೆ. ಕೊಳ್ಳೇಗಾಲ ಮಾರ್ಗವಾಗಿ ಸಂಚರಿಸುವ ಖಾಸಗಿ ಬಸ್ ಕ್ಲಿನರ್ ಆಗಿದ್ದು, ಈತ ಬಾಲಕಿಯನ್ನು ಅಪಹರಿಸಿ ಕೃತ್ಯ ಎಸಗಿದ್ದಾನೆಂದು ತಿಳಿದು ಬಂದಿದ್ದು, ಆತನ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.







