ಜಾಗತೀರಕರಣದಿಂದ ಪ್ರಜೆಗಳ ಪ್ರಜಾತಂತ್ರಕ್ಕೆ ಧಕ್ಕೆ : ಚಿಂತಕ ಶಿವಸುಂದರ್

ಮೈಸೂರು : ಜಾಗತೀರಕರಣದಿಂದ ಪ್ರಜೆಗಳ ಪ್ರಜಾತಂತ್ರಕ್ಕೆ ಧಕ್ಕೆಯಾಗಿದೆ ಎಂದು ಚಿಂತಕ ಶಿವಸುಂದರ್ ಅಭಿಪ್ರಾಯಪಟ್ಟಿದ್ದಾರೆ.
ಬನವಾಸಿ ತೋಟದಲ್ಲಿ ರವಿವಾರ ‘ಜಾಗತೀಕರಣವೊ ಮರು ವಸಾಹತೀಕರಣವೋ’ ವಿಚಾರ ಮಂಡನೆ ಮಾಡಿ ಅವರು ಮಾತನಾಡಿದರು.
1947ರಲ್ಲಿ ಸ್ವಾತಂತ್ರ್ಯ ಬಂತು. ಈ ಮೂಲಕ ಬ್ರಿಟಿಷರ ಗುಲಾಮಿತನದಿಂದ ಭಾರತ ಮುಕ್ತ ಆಯಿತು. ಆದರೆ ಜಾಗತೀಕರಣದಿಂದ ಮತ್ತೆ ಗುಲಾಮಿತನ ಅಥವಾ ಮರು ವಸಾಹತೀಕರಣ ಸೃಷ್ಟಿಯಾಗಿದೆ ಎಂದು ಹೇಳಿದರು.
ಹಿಟ್ಲರ್ ದೇಶವನ್ನು ವಿಂಗಡಿಸಿ ಆಳಿದ. ನಾಗರೀಕರ ಜೀವನವನ್ನು ದಮನ ಮಾಡುವ ಮೂಲಕ ಪ್ಯಾಸಿಸ್ಟ್ ರಾಜಕಾರಣ ಮಾಡಿದ. ಆ ಪ್ಯಾಸಿಸ್ಟ್ ರಾಜಕಾರಣ ದೇಶದಲ್ಲಿ ನಡೆಯುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ನರೇಂದ್ರ ಮೋದಿ 15 ಲಕ್ಷ ರೂ.ಕೊಡುತ್ತೇನೆ. ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇನೆ ಎಂದು ಹೇಳಿದರು. ಎಲ್ಲಿ ಕೊಟ್ಟರು? ಇದನ್ನು ಕೇಳಬೇಕೋ ಬೇಡವೋ? ಇದು ಒಡೆದು ಆಳುವ ನೀತಿಯೂ ಆಗಿದೆ. ಇದೇ ವಸಾಹತುಶಾಹೀಕರಣ ಎಂದರು.
ಕೇಂದ್ರ ಸರಕಾರದ ಎಸ್‌ಐಆರ್ ಹೊಸ ನೀತಿ ನಾಗರಿಕ ಸಮಾಜದ ವಿರೋಧಿಯಾಗಿದೆ. ಈ ನೀತಿಯು ಅವೈಜ್ಞಾನಿಕ ಮಾನದಂಡಗಳಿಂದ ಕೂಡಿದೆ. ಭಾರತದ ನಾಗರಿಕರಾಗಲೂ ಎಸ್‌ಐಆರ್ ನೀತಿಯಲ್ಲಿ ಜನನ ಪ್ರಮಾಣ ಕೇಳಿದ್ದಾರೆ. ದೇಶದ 60 ರಷ್ಟು ಜನರಿಗೆ ಪ್ರಮಾಣ ಪತ್ರವೇ ಇಲ್ಲ. ಆಸ್ತಿ ಪ್ರಮಾಣ ಪತ್ರ ಕೇಳಿದ್ದಾರೆ. ಎಲ್ಲರಿಗೂ ಆಸ್ತಿ ಇದೀಯಾ? ಮಹಿಳೆಯರಿಗೆ ಆಸ್ತಿ ಪ್ರಮಾಣ ಪತ್ರ ಇದೀಯಾ? ಪಾಸ್ ಪೋರ್ಟ್ ಇರಬೇಕು ಅಂತ ಕೇಳುತ್ತಿದ್ದಾರೆ. ಈ ಪ್ರಮಾಣ ಪತ್ರವನ್ನು ಕೊಡಲಿಲ್ಲ ಅಂದರೆ, ನಾಗರಿಕರಲ್ಲ, ಅನುಮಾನಸ್ಪದ ವ್ಯಕ್ತಿ ಎಂದು ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ. ಇದು ಬಿಹಾರದಲ್ಲಿ ಆಗಿದೆ. ದಮನಿತ ಸಮುದಾಯದಲ್ಲಿ ಇವರು ಕೇಳುವ ಯಾವ ಪ್ರಮಾಣ ಪತ್ರ ಸಿಗುವುದೇ ಇಲ್ಲ. ನಾಗರಿಕತ್ವವನ್ನು ಯಾಕೆ ನಿರಾಕರಿಸಬೇಕು? ಇವರ ಉದ್ದೇಶ ಏನು? ಇಡೀ ದೇಶವನ್ನು ವಸಾಹತೀಕರಣಗೊಳಿಸುವುದಾಗಿದೆ ಎಂದು ಹೇಳಿದರು.
ಮೇಲ್ವರ್ಗದ ಜಾತಿ ಜನಗಳಿಗೆ ಮಾತ್ರವೇ ಭಾರತ ಎಂಬಂತಹ ವಾತಾವರಣ ಸೃಷ್ಟಿಗೆ ಕೇಂದ್ರ ಸರಕಾರ ನಾಂದಿ ಹಾಡಿದೆ. ಮೋದಿ ಇದನ್ನು ಅಮೃತ ಕಾಲ ಅಂತ ಕರೆಯುತ್ತಾರೆ. ಇದು ಮನುವಾದ ಆಗಿದೆ ಎಂದರು.
ಜಾತಿ ಇರುವುವರೆಗೂ ಭಾರತ ದೇಶವೇ ಅಗುವುದಿಲ್ಲ ಎಂದು ಅಂಬೇಡ್ಕರ್ ಹೇಳುತ್ತಾರೆ. ಭಾರತದಲ್ಲಿ ಜಾತಿ ಕಾರಣಕ್ಕೆ ಏನಲ್ಲಾ ಆಗಿದೆ ಎಂಬುದು ಅರ್ಥಮಾಡಿಕೊಳ್ಳಬೇಕಿದೆ. ಇದು ವಸಾಹತೀಕರಣದ ರೂಪವೇ ಆಗಿದೆ ಎಂದು ಶಿವಸುಂದರ್ ಹೇಳಿದರು.
ಮುಂದಿನ ಜನಗಣತಿಯಲ್ಲಿ ಬಹುಸಂಖ್ಯಾತರ ನಾಗರೀಕತೆಯನ್ನು ವಂಚಿಸುವ ಹುನ್ನಾರ ನಡೆಯಬಹುದಾದ ಸಂಭವವಿದೆ. ಇದನ್ನು ರಾಜಕೀಯ ಮರು ವಸಾಹತೀಕರಣ ಅಂತ ಕರೆಯಬಹುದು. ಕಳೆದ ಏಳು ವರ್ಷಗಳಿಂದ ಎಸ್ಸಿ, ಒಬಿಸಿಯ ಹೆಣ್ಣುಮಕ್ಕಳ ಶಿಕ್ಷಣದಿಂದ ಡ್ರಾಪ್ ಔಟ್ ಸಂಖ್ಯೆ ಹೆಚ್ಚಳವಾಗಿದೆ. ಇದು ಆಘಾತ ತಂದಿದೆ. ಇದು ಸರಕಾರದ ಅಂಕಿ ಅಂಶಗಳಾಗಿವೆ. ಸರಕಾರ ಶ್ರೀಮಂತರ ಮಕ್ಕಳ ಭವಿಷ್ಯದ ಬಗ್ಗೆ ಮಾನದಂಡ ರೂಪಿಸುತ್ತಿದೆ. ಇದು ಬ್ರಾಹ್ಮಣ್ಯದ ಸಂಚಾಗಿದೆ. ಇಲ್ಲಿ ಯಾರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಬಗ್ಗೆ ಅರ್ಥಮಾಡಿಕೊಳ್ಳಬೇಕಿದೆ.
-ಶಿವಸುಂದರ್, ಚಿಂತಕ







