ಶಿಕ್ಷಣ, ಉದ್ಯೋಗದಲ್ಲಿ ಖಾಸಗೀಕರಣ ವ್ಯಾಪಕವಾಗಿದೆ : ಶಿವಸುಂದರ್

ಮೈಸೂರು/ಪಿರಿಯಾಪಟ್ಟಣ : ದೇಶದ ಬಂಡವಾಳಶಾಹಿ ವ್ಯವಸ್ಥೆ ಬಡವರಿಗೆ ಶಿಕ್ಷಣ, ಉದ್ಯೋಗ ಕೊಡುವುದು ಇರಲಿ ಮುಂದಿನ ದಿನಗಳಲ್ಲಿ ಉಸಿರಾಟಕ್ಕೆ ಆಮ್ಲಜನಕವನ್ನು ಕೊಡದೇ ಇರುವ ಸಂದರ್ಭ ಬರಬಹುದು ಎಂದು ಚಿಂತಕ ಹಾಗೂ ಅಂಕಣಕಾರ ಶಿವಸುಂದರ್ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ರತ್ನಪುರಿ ಗ್ರಾಮದಲ್ಲಿ ಜೆಕೆ ಫಂಕ್ಷನ್ ಹಾಲಿನಲ್ಲಿ ನಡೆದ ‘ಅರಿವಿನ ಚಾವಡಿ’ ಕಾರ್ಯಕ್ರಮದಲ್ಲಿ ‘ಸಂವಿಧಾನದ ಮುಂದಿರುವ ಸವಾಲುಗಳು’ ವಿಷಯ ಕುರಿತು ಮಾತನಾಡಿದ ಅವರು, ಪ್ರಶ್ನಿಸುವವನ ವಿರುದ್ಧ ಬೇಡವಾದ ವಿಷಯಗಳನ್ನು ಅವರ ಮೇಲೆ ಹೇರಿ ದೇಶದ್ರೋಹ ಪಟ್ಟಕಟ್ಟಲಾಗುತ್ತಿದೆ. ಆದ್ದರಿಂದ ಸಂವಿಧಾನವು ಅಪಾಯದಲ್ಲಿದ್ದು ಅದರ ರಕ್ಷಣೆ ಮತ್ತು ನ್ಯಾಯಬದ್ಧ ಹೋರಾಟ ಅನಿವಾರ್ಯವಾಗಿದೆ ಎಂದು ತಿಳಿಸಿದರು.
ವಿಚಾರವಾದಿ ಪೀರ್ ಭಾಷಾ ಮಾತನಾಡಿ, ಈ ವೈಜ್ಞಾನಿಕ ಯುಗದಲ್ಲೂ ರಾಷ್ಟ್ರೀಯ ರಾಜಕೀಯ ನಾಯಕನಾದ ಮಲ್ಲಿಕಾರ್ಜುನ ಖರ್ಗೆರವರು ದಲಿತ ಎಂಬ ಕಾರಣಕ್ಕೆ ಭಾಷಣ ಮಾಡಿದ ಜಾಗವನ್ನು ಶುದ್ಧೀಕರಣ ಮಾಡುವ ಮನಸ್ಥಿತಿಯಲ್ಲಿರುವವರ ಮಧ್ಯೆ ನಾವಿದ್ದೇವೆ. ಹೀಗಾದರೆ ದೇಶದಲ್ಲಿ ಹೇಗೆ ಸಮಾನತೆಯನ್ನು ಉಹಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ಚಿಂತಕ ಶ್ರೀಪಾದ್ ಭಟ್ ಮಾತನಾಡಿ, ಉದ್ಯೋಗ ಮತ್ತು ಶಿಕ್ಷಣದ ಭದ್ರತೆಗಾಗಿ ದಲಿತ ಸಂಘಟನೆಗಳು ಹೋರಾಟ ಪರಿವರ್ತನೆೆಯಾಗಬೇಕಾಗಿದೆ. ಇಂದಿನ ದಿನಗಳಲ್ಲಿ ನಮ್ಮನೆಲ್ಲ ಆಳುವ ಸರಕಾರಗಳು ಟಿಎಸ್‌ಪಿ ಮತ್ತು ಎಸ್‌ಇಪಿ ಸೇರಿದಂತೆ ವಿವಿಧ ಯೋಜನೆಗಳ ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ವಿವಿಧ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದೆ. ಇದು ಕಾನೂನು ಮತ್ತು ಸಂವಿಧಾನದ ವಿರೋಧಿಯ ನಡೆಯಾಗಿದೆ. ಆದ್ದರಿಂದ ದಲಿತ ಸಂಘಟನೆಗಳು ಇಂದಿನ ವ್ಯವಸ್ಥೆಯನ್ನು ಅರಿತು ಸರಿಪಡಿಸಲು ಹೋರಾಟಕ್ಕೆ ಮುಂದಾಗಬೇಕೆಂದು ಕಿವಿಮಾತು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಹರಿಹರ ಆನಂದ ಸ್ವಾಮಿ ಮಾತನಾಡಿ, ಪ್ರಸಕ್ತ ದಿನಮಾನದಲ್ಲಿ ಇರುವ ಭೀಕರತೆಯನ್ನು ಇಂದಿನ ಪೀಳಿಗೆಗೆ ಮನವರಿಕೆ ಮಾಡುವುದು ಅನಿವಾರ್ಯವಾಗಿದೆ ಹಾಗೂ ಈ ಜಾಗೃತಿಯನ್ನು ಮುಂದುವರಿಸಬೇಕೆಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಕೋಟೆಬೆಟ್ಟಯ್ಯ, ಅಹಿಂದ ಜವರಪ್ಪ, ಎಚ್.ಡಿ.ರಮೇಶ್, ಟಿಜೆಎಸ್ ಅವಿನಾಶ್, ರತ್ನಪುರಿ ಪ್ರಸನ್ನ, ರಾಜು, ದರ್ಶನ್, ಪ್ರಜ್ವಲ್, ಹಾಜರಿದ್ದರು.
ಶಿಕ್ಷಣದಲ್ಲಿ ಸಮಾನತೆ ಇಲ್ಲವಾಗಿದ್ದು, ಶಿಕ್ಷಣ ಮತ್ತು ಉದ್ಯೋಗದಲ್ಲಿ ಖಾಸಗೀಕರಣ ವ್ಯಾಪಕವಾಗಿ, ಆಳುವ ಸರಕಾರದ ಶಾಸಕರು ಮತ್ತು ಮಂತ್ರಿಗಳು ವ್ಯಾಪಾರಿಕರಣ ಮಾಡಿಕೊಂಡಿರುವುದರಿಂದ ಬಡವರು ಮತ್ತು ದಲಿತರ ಮಕ್ಕಳಿಗೆ ಉನ್ನತ ಮಟ್ಟದಲ್ಲಿ ಯಾವುದೇ ಅವಕಾಶ ದೊರೆಯದಂತೆ ತಂತ್ರಗಾರಿಕೆ ನಡೆಸುತ್ತಿದ್ದು ಸಂವಿಧಾನದ ಆಶಯವನ್ನು ಈಡೇರದಂತೆ ಮಾಡಿದ್ದಾರೆ.
-ಶಿವಸುಂದರ್, ಚಿಂತಕ






