ಶಾಸಕರು, ಸಂಸದರು ಎಸ್‌ಐಆರ್ ಬಗ್ಗೆ ಜಾಗೃತಿ ವಹಿಸದಿದ್ದರೆ ನಿಮ್ಮ ರಾಜಕೀಯ ಮಾರಣ ಹೋಮ ಕಟ್ಟಿಟ್ಟ ಬುತ್ತಿ: ಸಿದ್ದರಾಮಯ್ಯ

ಮೈಸೂರು : ವಿಶೇಷ ಮತ ಪರಿಷ್ಕರಣೆ (ಎಸ್.ಐ.ಆರ್) ಬಗ್ಗೆ ಶಾಸಕರುಗಳು, ಸಂಸದರುಗಳು ಜಾಗೃತಿ ವಹಿಸದಿದ್ದರೆ ನಿಮ್ಮ ರಾಕೀಯ ಮಾರಣ ಹೋಮ ಕಟ್ಟಿಟ್ಟ ಬುತ್ತಿ. ಹಾಗಾಗಿ ಎಲ್ಲರೂ ಜಾಗೃತಿ ವಹಿಸಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ನಗರದ ಜೆ.ಕೆ.ಮೈದಾನದಲ್ಲಿ ರವಿವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಮೈಸೂರು ವಿಭಾಗೀಯ ಮಟ್ಟದ ಎಸ್.ಐ.ಆರ್ ಜಾಗೃತ ಸಮಾವೇಶದಲ್ಲಿ ಮಾತನಾಡಿದರು.
ಎಸ್.ಐ.ಆರ್ ಪ್ರಕ್ರಿಯೆ ಜೂ.30 ರಿಂದ ಜುಲೈ 29 ರವರೆಗೆ ರಾಜ್ಯದಲ್ಲಿ ನಡೆಯಲಿದೆ. ಈ ಒಂದು ತಿಂಗಳು ಶಾಸಕರುಗಳು, ಸಂಸದರು, ಮಾಜಿ ಶಾಸಕರು, ಪಕ್ಷದ ಮುಖಂಡರುಗಳು ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಒಬ್ಬ ಮತದಾರರನೂ ಮತದಾನದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ರಾಜಕೀಯ ಮಾರಣ ಹೋಮ ಆಗಲಿದೆ. ನಮ್ಮ ರಾಜಕಾರಣ ಮುಗಿಯಿತು. ನಿಮ್ಮ ಭವಿಷ್ಯಕ್ಕಾಗಿ ನೀವು ಎಚ್ವರಿಕೆ ವಹಿಸಬೇಕು ಎಂದರು.
ಈಗ ಶಾಸಕರಾಗಿರುವವರು 1,2,3,4,5 ಸಾವಿರ ಅಂತರದಿಂದ ಗೆದ್ದಿದ್ದಾರೆ. ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಎಸ್.ಐ.ಆರ್ ಮೂಲಕ ಕನಿಷ್ಠ 10 ಸಾವಿರ ಮತದಾರರನ್ನು ಕೈ ಬಿಟ್ಟರೆ ನಿಮ್ಮ ರಾಜಕೀಯ ಮುಗಿದ ಹಾಗೆ. ಹಾಗಾಗಿ ಈ ಒಂದು ತಿಂಗಳು ಎಲ್ಲರೂ ಕಷ್ಟಪಟ್ಟು ಪ್ರಜಾಪ್ರಭುತ್ವ ಉಳಿಸುವ ಕೆಲಸ ಮಾಡಿ ಎಂದು ಹೇಳಿದರು.
ಬಿಜೆಪಿಯವರು ಸಂವಿಧಾನ, ಪ್ರಜಾಪ್ರಭುತ್ವದ ವಿರೋಧಿಗಳು. ಬಿಜೆಪಿ ಎಂದರೆ ಸುಳ್ಳು, ಸುಳ್ಳು ಕಾರ್ಖಾನೆಯನ್ನು ಉತ್ಪತ್ತಿ ಮಾಡುವವರು. ಸುಳ್ಳನ್ನೆ ಸತ್ಯ ಮಾಡುವವರು. ಬಿಜೆಪಿಯವರು ಅಧಿಕಾರಕ್ಕಾಗಿ ಏನನ್ನು ಮಾಡಲು ಹೇಸುವುದಿಲ್ಲ. ಆರೆಸ್ಸೆಸ್ ಸ್ಥಾಪಿಸಿದ ಹೆಗಡೆವಾರ್ ತಮ್ಮ ಆಪ್ತರನ್ನು ಇಟಲಿಗೆ ಕಳುಹಿಸಿ ಸರ್ವಾಧಿಕಾರದ ಬಗ್ಗೆ ಅಧ್ಯಯನ ನಡೆಸಿದರು. ಅವರು ಅಲ್ಲಿಂದಲೇ ಸರ್ವಾಧಿಕಾರದ ಪ್ರೇರಣೆಗೆ ಮುಂದಾದರು. ಹಾಗಾಗಿಯೇ ಒಂದು ದೇಶ ಒಂದು ಚುನಾವಣೆ ಎಂದು ಘೋಷಣೆ ಮಾಡುತ್ತಿರುವುದು. ಅವರ ಬಗ್ಗೆ ಕಾರ್ಯಕರ್ತರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.






