ನೂರು ವರ್ಷ ಬದುಕಬೇಕು ಎಂಬ ಆಸೆ ಇದೆ : ಸಿದ್ದರಾಮಯ್ಯ

ಮೈಸೂರು : "ನಾನು ನೂರು ವರ್ಷ ಬದುಕಬೇಕು ಎಂಬ ಆಸೆ ಇದೆ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೀರಪ್ಪ ಮೊಯ್ಲಿ ಅವರು ನೂರು ವರ್ಷಕ್ಕಿಂತ ಹೆಚ್ಚು ವರ್ಷ ಬಾಳಲಿ ಎಂದು ಹಾರೈಸಿದರು. ಈ ವೇಳೆ ವೇದಿಕೆಯಲ್ಲಿದ್ದ ಸಂಸ್ಕೃತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಪದ್ಮಾ ಶೇಖರ್ ಅವರು ʼನೀವು ನೂರು ವರ್ಷ ಬದುಕಬೇಕುʼ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ʼನಾನು ನೂರು ವರ್ಷ ಇರುತ್ತೇನೆ ಎಂದು ಹೇಳಲು ಬರಲ್ಲ, ಆದರೆ ನೂರು ವರ್ಷ ಬದುಕಬೇಕು ಎಂಬ ಆಸೆ ಮಾತ್ರ ಇದೆʼ ಎಂದು ಹೇಳಿದರು. ಈ ಪ್ರಸಂಗ ಎಲ್ಲರ ಮುಖದಲ್ಲೂ ನಗು ಮೂಡಿಸಿತು.
ವೀರಪ್ಪ ಮೊಯ್ಲಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಿಗಲಿ:
ರಾಜಕಾರಣಿಗಳು ಸಾಹಿತಿಗಳಾಗುವುದು ಬಹಳ ವಿರಳ, ಆದರೆ ವೀರಪ್ಪ ಮೊಯ್ಲಿ ಅವರು ದೊಡ್ಡ ಸಾಹಿತಿಯಾಗಿದ್ದಾರೆ. ಅವರಿಗೆ ಸರಸ್ವತಿ ಸಮ್ಮಾನ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. ಮುಂದೆ ಜ್ಞಾನಪೀಠ ಪ್ರಶಸ್ತಿಯೂ ಸಿಗಲಿ ಎಂದು ಸಿದ್ದರಾಮಯ್ಯ ಆಶಿಸಿದರು.
ವೀರಪ್ಪ ಮೊಯ್ಲಿ ಅವರು ಈ ಕೃತಿಯನ್ನು ಐದು ಸಂಪುಟ ಮಾಡುತ್ತಾರೆ ಎಂದುಕೊಂಡಿದ್ದೆ. ಅದರೆ ಅವರು ಹತ್ತು ಸಂಪುಟ ಮಾಡುವುದಾಗಿ ಹೇಳಿದ್ದಾರೆ. ಅವರಿಗೆ ಆಯಸ್ಸು- ಆರೋಗ್ಯ ಹೆಚ್ಚು ಸಿಗಲಿ, ಅವರು ಬದುಕಿರುವವರೆಗೂ ಸಾಹಿತ್ಯ ಕೃಷಿಯನ್ನು ಮಾಡಲಿ ಎಂದು ಹೇಳಿದರು.






