ಪುತ್ರನನ್ನು ಲೀಡರ್ ಮಾಡಲು ಸಿದ್ದರಾಮಯ್ಯ ಎಲ್ಲಾ ಕಾಂಗ್ರೆಸ್ ನಾಯಕರ ರಾಜಕೀಯ ಮುಗಿಸಿದ್ದಾರೆ: ಪ್ರತಾಪ್ ಸಿಂಹ

ಸಿದ್ದರಾಮಯ್ಯ / ಪ್ರತಾಪ್ ಸಿಂಹ
ಮೈಸೂರು: ಮಗನನ್ನು ಮಂತ್ರಿ ಮಾಡಲು ಮಲ್ಲಿಕಾರ್ಜುನ ಖರ್ಗೆ ಆ ಭಾಗದ ಎಲ್ಲಾ ಕಾಂಗ್ರೆಸ್ ನಾಯಕರ ರಾಜಕೀಯ ಮುಗಿಸಿದರು. ಮೈಸೂರು ಭಾಗದಲ್ಲಿ ಮಗನನ್ನು ಲೀಡರ್ ಮಾಡಲು ಸಿದ್ದರಾಮಯ್ಯ ಎಲ್ಲಾ ಕಾಂಗ್ರೆಸ್ ನಾಯಕರ ರಾಜಕೀಯ ಮುಗಿಸಿದ್ದಾರೆ. ಡಾ. ಮಹದೇವಪ್ಪ, ಕೆ ವೆಂಕಟೇಶ್ ಎಲ್ಲರನ್ನು ಸಿದ್ದರಾಮಯ್ಯ ಮೂಲೆ ಗುಂಪು ಮಾಡಿದ್ದಾರೆ ಎಂದು ಮಾಜಿ ಸಂಸದ ಪ್ರತಾಪಸಿಂಹ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭ್ಯ ರಾಜಕಾರಣಿ ತನ್ವೀರ್ ಸೇಠ್ ಗೆ ಅವಕಾಶ ತಪ್ಪಿಸಿದ್ದು ಸಿದ್ದರಾಮಯ್ಯ. ದಲಿತರ ಧ್ವನಿ ಆಗಿರುವ ಮಹದೇವಪ್ಪರ ಸ್ನೇಹವನ್ನೇ ಸಿದ್ದರಾಮಯ್ಯ ಮರೆತು ಬಿಟ್ಟರು. ತನ್ನ ಮಗನ ಮೇಲೆ ಮಾತ್ರ ಕಿರೀಟ ಇರಬೇಕು ಅಂತಾ ಎಲ್ಲಾ ನಾಯಕರ ರಾಜಕೀಯ ಮುಗಿಸಿದ್ದಾರೆ ಎಂದು ಟೀಕಿಸಿದರು.
ಭ್ರಷ್ಟಾಚಾರ ಮಾಡಿ 14 ನಿವೇಶನ ಪಡೆದು ಭ್ರಷ್ಟಾಚಾರ ಬಗ್ಗೆ ಮಾತಾಡುವ ನೈತಿಕತೆಯನ್ನು ಸಿದ್ದರಾಮಯ್ಯ ಕಳೆದುಕೊಂಡಿದ್ದರು. ಈಗ ಮಗನಿಗಾಗಿ ಎಲ್ಲರ ರಾಜಕೀಯ ಮುಗಿಸಿ ಕುಟುಂಬ ರಾಜಕೀಯದ ಬಗ್ಗೆ ಟೀಕೆ ಮಾಡುವ ನೈತಿಕತೆ ಕಳೆದುಕೊಂಡಿದ್ದಾರೆ. ಸಂಪುಟದಲ್ಲಿ ಒಬ್ಬ ಮಹಿಳೆಯೂ ಇಲ್ಲ. ಕಾಂಗ್ರೆಸ್ ಮಹಿಳಾ ವಿರೋಧಿ. ಲಕ್ಷ್ಮಿ ಹೆಬ್ಬಾಳ್ಕರ್, ಗಾಯತ್ರಿ ಶಾಂತೇಗೌಡ ಇಬ್ಬರು ಮಂತ್ರಿ ಆಗುವುದಕ್ಕೆ ಕಲ್ಲು ಹಾಕಿದವರು ಸಿದ್ದರಾಮಯ್ಯ ಎಂದು ಪ್ರತಾಪ್ ಸಿಂಹ ಆರೋಪಿಸಿದರು.
ರಾಜಕೀಯ ಹಾಳು ಮಾಡಿ ಈಗ ರಾಜಕೀಯ ಹೊಲಸಾಗಿದೆ ಅಂತಾ ಸಿದ್ದರಾಮಯ್ಯ ಭಾಷಣ ಮಾಡುತ್ತಾರೆ. ಯತೀಂದ್ರ ಸಿದ್ದರಾಮಯ್ಯ ಮೆರಿಟ್ ಖೋಟಾದಲ್ಲಿ ಮಂತ್ರಿ ಆಗಿಲ್ಲ. ಅಪ್ಪನ ಖೋಟಾದಲ್ಲಿ ಮಂತ್ರಿ ಅಷ್ಟೆ. ಮೆರಿಟ್ ಇಲ್ಲದ ಯತೀಂದ್ರ ಈ ಭಾಗದಲ್ಲಿ ಲೀಡರ್ ಆಗಲ್ಲ ಅನ್ನೋ ಕಾರಣಕ್ಕೆ ಮಹಾದೇವಪ್ಪ ಅವರಂತಹ ದಲಿತರ ಧ್ವನಿಯನ್ನು ಸಿದ್ದರಾಮಯ್ಯ ಕುಗ್ಗಿಸಿದ್ದಾರೆ ಎಂದು ಅವರು ಹೇಳಿದರು.
ಯಾರು ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿಲ್ಲ. ಇದು ಸ್ವಾಭಾವಿಕವಾಗಿ ಹಿಂದೂ ರಾಷ್ಟ್ರ. ಯತೀಂದ್ರ ಅಪ್ಪನದು ಮೊದಲಿಂದಲೂ ಇದೇ ಪಾಲಿಟಿಕ್ಸ್. ಯತೀಂದ್ರ ಅವರೇ ನಿಮಗೆ ಮಂತ್ರಿ ಸ್ಥಾನ ಸಿಕ್ಕಿದು ಇದೇ ಹಿಂದೂ ಧರ್ಮದ ಜಾತಿ ವ್ಯವಸ್ಥೆಯಿಂದ. ನಿಮ್ಮದು ಜಾತಿ ಖೋಟಾ.
-ಪ್ರತಾಪ್ ಸಿಂಹ, ಮಾಜಿ ಸಂಸದ.






