ಎಸ್ಐಆರ್ ಪ್ರಕ್ರಿಯೆ ಅಸಂವಿಧಾನಿಕ, ಕೂಡಲೇ ಸ್ಥಗಿತಗೊಳಿಸಬೇಕು : ಎಸ್.ಡಿ.ಪಿ.ಐ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯ

ಮೈಸೂರು : ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಅಸಂವಿಧಾನಿಕವಾಗಿದ್ದು, ಇದು ಮತದಾರರ ಹಕ್ಕುಗಳಿಗೆ ಧಕ್ಕೆ ತರುವ ಸಾಧ್ಯತೆಯಿದೆ. ಹೀಗಾಗಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ನಿರ್ಣಯ ಅಂಗೀಕರಿಸಿದೆ.
ನಗರದ ಲಲಿತಮಹಲ್ ಹೋಟೆಲ್ ಪ್ಯಾಲೇಸ್‌ನಲ್ಲಿ ಎರಡು ದಿನಗಳ ಕಾಲ ನಡೆದ ಪಕ್ಷದ ರಾಷ್ಟ್ರ ಮಟ್ಟದ ಕಾರ್ಯಕಾರಿಣಿ ಸಭೆಯ ಬಳಿಕ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ನಿರ್ಣಯ ಮಂಡಿಸಿ ಎಸ್‌ಐಆರ್ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಿ, ಮತದಾನ ಹಕ್ಕಿನಿಂದ ವಂಚಿತರಾಗಿರುವ ಅರ್ಹ ಮತದಾರರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರಸ್ತುತ ಜಾರಿಯಲ್ಲಿರುವ ಎಸ್‌ಐಆರ್ ಪ್ರಕ್ರಿಯೆಯಿಂದ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಿದ್ದು, ತಾಂತ್ರಿಕ ದೋಷಗಳು ಮತ್ತು ಹೆಸರಿನ ಅಕ್ಷರಗಳ ವ್ಯತ್ಯಾಸಗಳಿಂದ ಲಕ್ಷಾಂತರ ಜನರ ಮತದಾನ ಹಕ್ಕು ಕಸಿದುಕೊಳ್ಳುವ ಅಪಾಯ ಎದುರಾಗಿದೆ ಎಂದು ಅವರು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ಸುಮಾರು 27 ಲಕ್ಷ ಜನರು ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ಮತದಾರರ ತಂದೆ-ತಾಯಿಯ ಹೆಸರಿನ ಹೊಂದಾಣಿಕೆ ಸಮಸ್ಯೆ, ಅಕ್ಷರದೋಷ ಹಾಗೂ ಇತರೆ ತಾಂತ್ರಿಕ ಕಾರಣಗಳಿಂದ ಅನೇಕರು ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೆ ಎಂದು ಆರೋಪಿಸಿದರು.
ಈ ಸಂಬಂಧ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋದ ಬಳಿಕ ಸಮಿತಿ ರಚನೆಯಾದರೂ, ಸಲ್ಲಿಕಯಾಗಿದ್ದ ಲಕ್ಷಾಂತರ ಅರ್ಜಿಗಳ ಪೈಕಿ ಅಲ್ಪ ಪ್ರಮಾಣದ ಅರ್ಜಿಗಳನ್ನಷ್ಟೇ ಪರಿಗಣಿಸಲಾಗಿದೆ ಎಂದು ದೂರಿದರು.
ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಅಬ್ದಲ್ ಮಜೀದ್ ಮಾತನಾಡಿ, ದೇಶದಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಆದಿವಾಸಿ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಎನ್‌ಜಿಓಗಳನ್ನು ಗುರಿಯಾಗಿಸಲಾಗುತ್ತಿದೆ. ವಿಶೇಷವಾಗಿ ಕ್ರಿಶ್ಚಿಯನ್ ಸಮುದಾಯ, ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಿ ಎನ್‌ಜಿಓಗಳಿಗೆ ಬರುವ ಎಫ್.ಸಿ.ಐ ಮೊತ್ತವನ್ನು ನಿಲ್ಲಿಸಿರುವುದನ್ನು ಹಿಂಪಡೆಯಬೇಕು. ಜೊತೆಗೆ ಮುಸ್ಲಿಮರು, ಕ್ರೈಸ್ತರು ಹಾಗೂ ಪಾದ್ರಿಗಳ ಮೇಲೆ ನಡೆಯುತ್ತಿರುವ ದಾಳಿಗಳು ಮತ್ತು ಯಾವುದೇ ಕಾನೂನು ಪ್ರಕ್ರಿಯೆ ಇಲ್ಲದೆ ಬುಲ್ಡೋಜರ್ ಕ್ರಮ ಕೈಗೊಳ್ಳುತ್ತಿರುವುದನ್ನು ಪಕ್ಷ ಖಂಡಿಸಿದೆ ಎಂದರು.
ಎಸ್‌ಐಆರ್ ಪ್ರಕ್ರಿಯೆ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಕೇವಲ ಸ್ಪೆಲ್ಲಿಂಗ್ ದೋಷದ ಕಾರಣದಿಂದ ಲಕ್ಷಾಂತರ ಜನರನ್ನು ಮತದಾನದಿಂದ ಹೊರಗಿಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಎಸ್‌ಐಆರ್ ಅರ್ಜಿಗಳ ಭರ್ತಿಯಲ್ಲಿ ಬಿಎಲ್‌ಓಗಳು ತೀವ್ರ ಒತ್ತಡ ಎದುರಿಸುತ್ತಿದ್ದು, ಕಡಿಮೆ ಅವಧಿಯಲ್ಲಿ ಎಲ್ಲ ಮನೆಗಳಿಗೆ ಭೇಟಿ ನೀಡುವುದು ಅವರಿಗೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿವಿಧ ಸ್ಥಳಗಳಲ್ಲಿ ಜನರನ್ನು ಒಟ್ಟುಗೂಡಿಸಿ ಅರ್ಜಿ ಭರ್ತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಮಸೀದಿ, ಮಂದಿರ ಅಥವಾ ಚರ್ಚ್‌ಗಳಲ್ಲಿ ಅರ್ಜಿ ಭರ್ತಿ ಕಾರ್ಯ ನಡೆಸುವುದರಲ್ಲಿ ಯಾವುವುದೇ ಸಮಸ್ಯೆ ಇಲ್ಲ. ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಂಡು ಬಿಜೆಪಿ ಸಮಾಜವನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ಎಸ್‌ಡಿಪಿಐ ರಾಷ್ಟ್ರೀಯ ಉಪಾಧ್ಯಕ್ಷ ಸೀತಾರಾಮ್ ಕೊಯಿಯಾಳ್, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಆಶ್ರಫ್, ಇಲ್ಯಾಸ್ ತುಂಬೆ, ಕಾರ್ಯದರ್ಶಿ ಡಿ.ಎಸ್.ಬಿಂದ್ರಾ, ಆಲ್ಫನ್ಸೋ ಫ್ರಾಂಕ್, ಸಹೀದ ಸಾದೀಯಾ, ದೇವನೂರು ಪುಟ್ಟನಂಜಯ್ಯ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
2028ರ ವಿಧಾನಸಭೆ ಚುನಾವಣೆಗೆ ಶೀಘ್ರದಲ್ಲೇ ಎಸ್.ಡಿ.ಪಿ.ಐ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಅಬ್ದುಲ್ ಮಜೀದ್
ರಾಜ್ಯದಲ್ಲಿ ಮುಂಬರುವ 2028 ರ ಚುನಾವಣೆಗೆ ಎಸ್.ಡಿ.ಪಿ ಪಕ್ಷ ಸಿದ್ಧತೆ ನಡೆಸುತ್ತಿದ್ದು, ಶೀಘ್ರದಲ್ಲೇ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಎಸ್.ಡಿ.ಪಿ.ಐ ಬಿಡುಗಡೆ ಮಾಡಲಿದೆ ಎಂದು ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ತಿಳಿಸಿದರು.
ಎಸ್.ಡಿ.ಪಿ.ಐ ಒಂದು ರಾಜಕೀಯ ಪಕ್ಷವಾಗಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದೆ. ನಮ್ಮ ಪಕ್ಷ ವಿಧಾನಸಭೆ, ಜಿಬಿಎ, ಗ್ರಾ.ಪಂ, ಮಹಾನಗರ ಪಾಲಿಕೆ, ನಗರಸಭೆ ಸೇರಿದಂತೆ ಯಾವುದೇ ಚುನಾವಣೆ ಎದುರಾದರೂ ಸ್ಫರ್ಧೆ ಮಾಡುತ್ತದೆ ಎಂದು ಹೇಳಿದರು.






