ಸೌಜನ್ಯಾ ಪ್ರಕರಣದ ತನಿಖೆಗೆ ಆದೇಶಿಸಿದರೆ, ಸಾವಿಗೆ ಕಾರಣ ಯಾರೆಂಬುದನ್ನು ಖಚಿತಪಡಿಸುತ್ತೇನೆ: ಸ್ನೇಹಮಯಿ ಕೃಷ್ಣ

ಮೈಸೂರು: ಸೌಜನ್ಯಾ ಅತ್ಯಾಚಾರ-ಹತ್ಯೆ ಪ್ರಕರಣದ ತನಿಖೆಗೆ ಸರಕಾರ ಆದೇಶಿಸಿದರೆ, ಆಕೆಯ ಸಾವಿಗೆ ಯಾರು ಕಾರಣ ಎಂಬುದನ್ನು ಖಚಿತ ಪಡಿಸುತ್ತೇನೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಲಂಚದ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣ ಬಳಿಕ ಕ್ಷಮೆ ಯಾಚಿಸಿದ್ದ ಹಿನ್ನೆಲೆಯಲ್ಲಿ 'ಸ್ನೇಹಮಯಿ ಕೃಷ್ಣ ಯಾವಾಗಲೂ ಯಾವುದೇ ಆಧಾರವಿಲ್ಲದೆ ಸುಳ್ಳು ಆರೋಪ ಮಾಡುತ್ತಾರೆ' ಎಂದು ಆರೋಪಿಸಿ ಗಿರೀಶ್ ಮಟ್ಟಣ್ಣವರ್ ವೀಡಿಯೊ ಬಿಡುಗಡೆ ಮಾಡಿದ್ದರು. ಇದಕ್ಕೆ ಫೇಸ್ ಬುಕ್ ಪೋಸ್ಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಸ್ನೇಹಮಯಿ ಕೃಷ್ಣ, ಸೌಜನ್ಯಾ ಪರ ಹೋರಾಟಗಾರ ಎಂದು ಹೇಳಿಕೊಳ್ಳುವ ಗಿರೀಶ್ ಮಟ್ಟಣ್ಣವರ್ ರೀತಿಯಲ್ಲಿ 13 ವರ್ಷಗಳಷ್ಟು ಸುದೀರ್ಘ ಸಮಯದಿಂದ, ಸೌಜನ್ಯಾಳ ಸಾವಿಗೆ ನ್ಯಾಯ ಕೊಡಿಸುವುದಾಗಿ ಹೇಳುವಂತೆ, ನಾನು ಬರೀ ಹೇಳಿಕೆ ಕೊಡುತ್ತಿಲ್ಲ. ಸೌಜನ್ಯಾ ಪ್ರಕರಣದ ತನಿಖೆಗೆ ಸರಕಾರ ಆದೇಶ ಮಾಡಿಸಲಿ, ಆಕೆಯ ಸಾವಿಗೆ ಯಾರು ಕಾರಣ ಎಂಬುದನ್ನು ಖಚಿತ ಪಡಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಸ್ನೇಹಮಯಿ ಕೃಷ್ಣ ಫೇಸ್ ಬುಕ್ ಪೋಸ್ಟ್ ನಲ್ಲೇನಿದೆ?
"ಶಾಲಿನಿ ರಜನೀಶ್ ರವರ ಹೆಸರು ಉಲ್ಲೇಖ ಮಾಡಿದ್ದರ ಬಗ್ಗೆ ನಾನು ಕ್ಷಮೆ ಕೇಳಿದನ್ನೇ ಆಧಾರವಾಗಿಟ್ಟುಕೊಂಡು, ನಾನು ಯಾವಾಗಲೂ, ಯಾವುದೇ ಆಧಾರವಿಲ್ಲದೆ ಸುಳ್ಳು ಆರೋಪ ಮಾಡುತ್ತೇನೆ ಎಂದು ಮಾತನಾಡಲಾಗುತ್ತಿದೆ. ಅದರಲ್ಲೂ ಸೌಜನ್ಯಾ ಪರ ಹೋರಾಟಗಾರ ಎಂದು ಹೇಳುವ ಗಿರೀಶ್ ಮಟ್ಟಣ್ಣವರ ಈ ಬಗ್ಗೆ ಒಂದು ವೀಡಿಯೋವನ್ನೇ ಬಿಡುಗಡೆ ಮಾಡಿದ್ದಾರೆ ! ನಾನು ಯಾವುದೇ ದಾಖಲೆಗಳ ಆಧಾರವಿಲ್ಲದೆ ಸುಳ್ಳು ಆರೋಪಗಳನ್ನು ಮಾಡಿದ್ದರೆ, ನಾನು ಮೊಕದ್ದಮೆ ದಾಖಲು ಮಾಡುತ್ತಿದ್ದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಕುಟುಂಬದ ಹೆಸರಿನಲ್ಲಿ ಪಡೆದಿದ್ದ, 60 ಕೋಟಿ ಮೌಲ್ಯದ 14 ನಿವೇಶನಗಳನ್ನು ಏಕೆ ವಾಪಸ್ಸು ಮಾಡುತ್ತಿದ್ದರು ? ಜಾರಿ ನಿರ್ದೇಶನಾಲಯದವರು ಇದುವರೆವಿಗೂ 460 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದರು ? ಮುಡಾದ ಹಿಂದಿನ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ರವರನ್ನು ಸುಮಾರು 70 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿ ಇಡುತ್ತಿದ್ದರು ? ನಾನು ದೂರು ದಾಖಲು ಮಾಡಿದ್ದ ಕೇವಲ ಒಂದುವರೆ ವರ್ಷದಲ್ಲಿ ಇಷ್ಟೆಲ್ಲಾ ಕೆಲಸ ಆಗುವಂತೆ ಮಾಡಿದ್ದೇನೆ, ಗಿರೀಶ್ ಮಟ್ಟಣ್ಣವರ್ ರೀತಿಯಲ್ಲಿ ಹದಿಮೂರು ವರ್ಷಗಳಷ್ಟು ಸುದೀರ್ಘ ಸಮಯದಿಂದ, ಸೌಜನ್ಯಳ ಸಾವಿಗೆ ನ್ಯಾಯ ಕೊಡಿಸುವುದಾಗಿ ಹೇಳುವಂತೆ, ನಾನು ಬರೀ ಹೇಳಿಕೆ ಕೊಡುತ್ತಿಲ್ಲ ! ಸೌಜನ್ಯ ಪ್ರಕರಣದ ತನಿಖೆಗೆ ಆದೇಶ ಮಾಡಿಸಲಿ, ಸೌಜನ್ಯ ಸಾವಿಗೆ ಯಾರು ಕಾರಣ ಎಂಬುದನ್ನು ಖಚಿತ ಪಡಿಸುತ್ತೇನೆ..."







