ʼಸ್ಟಿಂಗ್ ಆಪರೇಷನ್ʼ ವಿವಾದಕ್ಕೆ JDS ಪಕ್ಷವೇ ಕಾರಣ : ಎಂ.ಲಕ್ಷ್ಮಣ್ ಆರೋಪ
"ಪ್ರಕರಣದಲ್ಲಿ ಜೆಡಿಎಸ್ ಕಾರ್ಯಕರ್ತರ ಪಾತ್ರವಿದೆ"

ಮೈಸೂರು : ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ವಿವಾದಕ್ಕೆ ಜೆಡಿಎಸ್ ಪಕ್ಷವೇ ಮೂಲ ಕಾರಣ. ಸ್ಟಿಂಗ್ ವಿಡಿಯೋ ಪ್ರಕರಣದಲ್ಲಿ ಜೆಡಿಎಸ್ ಕಾರ್ಯಕರ್ತರ ಪಾತ್ರವಿದೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೆಡಿಎಸ್ ಕಾರ್ಯಕರ್ತ ಮೋಹನ್ ಗೌಡ ಅವರಿಂದ ಮೊಬೈಲ್ ಖರೀದಿಸಲು 50 ಸಾವಿರ ಹಣ ರವಾನೆಯಾಗಿದೆ. ಸ್ಟಿಂಗ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವ್ಯಕ್ತಿಗೆ ಇದಕ್ಕೂ ಮೊದಲು ಜೆಡಿಎಸ್ನಿಂದ 5 ಲಕ್ಷ ಹಣ ಸಂದಾಯವಾಗಿದೆ ಎಂದು ದೂರಿದರು.
ಈ ಸ್ಟಿಂಗ್ ನಲ್ಲಿ ಯಾರಿದ್ದಾರೆ ಎಂಬುದು ಒಂದು ವಾರದಲ್ಲಿ ತಿಳಿಯುತ್ತದೆ. ಕುಮಾರಸ್ವಾಮಿ ಅವರು ಈ ವಿಷಯ ಕುರಿತು ಮಾತನಾಡುವಾಗ ಲಿಂಕ್ ಮಿಸ್ ಮಾಡಿ ಮಾತನಾಡುತ್ತಾರೆ. ಆರೋಪಿ ಪರ ಬೇಲ್ ಕೊಡಿಸಲು ಹಾಜರಾದ ವಕೀಲರು ಯಾರು? ಆರೋಪಿ ಮೊಬೈಲ್ ಕೊಳ್ಳಲು ಹಣ ನೀಡಿದ ಜೆಡಿಎಸ್ ಕಾರ್ಯಕರ್ತ ಮೋಹನ್ ಗೌಡಗೆ 5 ಲಕ್ಷ ಕೊಟ್ಟಿದ್ದು ಯಾರು ಎಂಬುದಕ್ಕೆ ಕುಮಾರಸ್ವಾಮಿ ಅವರು ಉತ್ತರಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಸರ್ವೋಚ್ಚ ನಾಯಕರು. ಅವರಿಗೆ ತೊಂದರೆಯಾದರೆ ಯಾರೂ ಸುಮ್ಮನಿರುವುದಿಲ್ಲ. ಕುಮಾರಸ್ವಾಮಿ ಅವರ ಎಡ, ಬಲ ಮತ್ತು ಮಧ್ಯದವರು ಮಾಡಿರುವ ಕೆಲಸ ಇದು. ಜೆಡಿಎಸ್ ಕಾರ್ಯಕರ್ತ ಮೋಹನ್ ಗೌಡ ಮನೆಯಲ್ಲಿ 17 ಪೆನ್ ಡ್ರೈವ್ ಸಿಕ್ಕಿದೆ. ಮುಡಾ ವಿಷಯದಲ್ಲಿ ಕುಮಾರಸ್ವಾಮಿ ಅವರ ಪಾತ್ರವೇನು? ಈ ಎಲ್ಲಾ ವಿಷಯಗಳು ಸದ್ಯದಲ್ಲೇ ಬಹಿರಂಗವಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಶಿವಣ್ಣ, ಗಿರೀಶ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಮುಖಂಡರಾದ ಈಶ್ವರ್ ಚಕ್ಕಡಿ, ಶಿವಣ್ಣ, ಮಹೇಶ್ ಇದ್ದರು.
2028ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ವರುಣಾ ಕ್ಷೇತ್ರದಿಂದ ಕಣಕ್ಕಿಳಿಸುತ್ತೇವೆ. ಅವರು ಬೇಡ ಎಂದರೂ ನಾವು ಅವರ ಮನವೊಲಿಸುತ್ತೇವೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಬಿ.ಕೆ. ಹರಿಪ್ರಸಾದ್ ಮತ್ತು ಡಾ.ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ಮತ್ತೆ ಚುನಾವಣೆ ಎದುರಿಸುತ್ತೇವೆ.
- ಎಂ. ಲಕ್ಷ್ಮಣ್, ಕೆಪಿಸಿಸಿ ವಕ್ತಾರ






