ವಿದ್ಯಾರ್ಥಿಗಳು ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನಷ್ಟೇ ಧರಿಸಬಹುದು, ಕೇಸರಿ ಶಾಲಿಗೆ ಅವಕಾಶ ಇಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು, ಮೇ.14 : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು ಹೊರತು ಕೇಸರಿ ಶಾಲಿಗೆ ಅವಕಾಶ ಇಲ್ಲ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ನಗರದ ಟಿ.ಕೆ.ಲೇಔಟ್ ನಲ್ಲಿರುವ ತಮ್ಮ ನಿವಾಸದಲ್ಲಿ ಗುರುವಾರ ಬೆಳಿಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಾಂಪ್ರದಾಯಿಕವಾಗಿ ಅನುಸರಿಸುವ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು. ಹೊಸದಾಗಿ ಮಾಡುವಂತಿಲ್ಲ ಎಂದು ಹೇಳಿದರು.
ಕೇಸರಿ ಶಾಲು ಧರಿಸುವಂತಿಲ್ಲ, ಆದರೆ ಜನಿವಾರ, ಉಡುದಾರ, ಹಿಜಾಬ್, ರುದ್ರಾಕ್ಷಿ ಹಾಕಿಕೊಂಡು ಬರಬಹುದು. ಅವರವರ ನಂಬಿಕೆಗಳಿಗೆ ಅನುವಾಗುವ ಆಚರಣೆಯಲ್ಲಿರುವ ಧಾರ್ಮಿಕ ಸಂಕೇತಗಳನ್ನಷ್ಟೇ ಹಾಕಿಕೊಳ್ಳಬಹುದು ಹೊಸದಾಗಿ ಹಾಕಿಕೊಳ್ಳುವಹಾಗಿಲ್ಲ ಎಂದು ಹೇಳಿದರು.
ಪ್ರಧಾನಿಗಳ ಹೇಳಿಕೆ ಸರಿಯಿಲ್ಲ:
ಪ್ರಧಾನಿ ನರೇಂದ್ರ ಮೋದಿಯವರು ಡೀಸಲ್ ಬಳಕೆ ಕಡಿತಗೊಳಿಸಲು ತಮ್ಮ ಬೆಂಗಾವಲನ್ನು ಕಡಿತಗೊಳಿಸಿದ್ದು ಈ ಬಗ್ಗೆ ಕರ್ನಾಟಕದಲ್ಲಿಯೂ ಮಾಡಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಅದು ಕೇವಲ ತಾತ್ಕಾಲಿಕ ಕ್ರಮವಷ್ಟೇ. ಪ್ರಧಾನಿಗಳು ಹೇಳಿರುವುದು ಸರಿಯಾದ ಕ್ರಮವಲ್ಲ. ಅದಕ್ಕೆ ಬದಲು ಬೇರೆ ದೇಶಗಳೊಂದಿಗೆ ಮಾತನಾಡಿ ಒಮ್ಮತಕ್ಕೆ ಬರುವುದು ಸೂಕ್ತ ಎಂದರು.
ಸಂಪುಟ ಪುನರ್ ರಚನೆ ಮಾಡುವ ಉದ್ದೇಶವಿದೆ:
ಹೈಕಮಾಂಡ್ ಸಂಪುಟ ಪುನರ್ ರಚನೆ ಸಂಬಂಧ ದೆಹಲಿಗೆ ಬರಬೇಕು ಎಂದಾಗಷ್ಟೆ ದೆಹಲಿ ಹೋಗುತ್ತೇನೆ ಹೊರತು ನಾನೆ ದೆಹಲಿಗ ಹೋಗುವುದಿಲ್ಲ. ಸಂಪುಟ ಪುನರ್ ರಚನೆ ಮಾಡಬೇಕಿದೆ ಎಂದು ಹೇಳಿದರು.
ಕೇಂದ್ರ ಸರಕಾರ ನೀಟ್ ಪರೀಕ್ಷೆಯನ್ನು ಸರಿಯಾಗಿ ನಿರ್ವಹಿಸಿಲ್ಲ:
ನೀಟ್ ಪ್ರಶ್ನೆ ಪತ್ರಿಕೆ ಉತ್ತರ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಮಾತನಾಡಿದ ಅವರು, ಕೇಂದ್ರ ಸರಕಾರ ನೀಟ್ ಪರೀಕ್ಷೆಯನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದರು.






