ಟಿ.ನರಸೀಪುರದಲ್ಲಿ ಸೆ.18 ರಂದು ʼಸಂವಿಧಾನ ಸೌಹಾರ್ದ ರಥಯಾತ್ರೆʼ : ಎನ್.ಭಾಸ್ಕರ್
ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿಯಿಂದ ಎಸ್‌ಪಿಗೆ ಮನವಿ ಸಲ್ಲಿಕೆ

ಮೈಸೂರು : ಟಿ.ನರಸೀಪುರ ಪಟ್ಟಣದಲ್ಲಿ ಸೆ.18 ರಂದು "ಸಂವಿಧಾನ ಸೌಹಾರ್ದ ರಥಯಾತ್ರೆ" ಗೆ ಅನುಮತಿ ನೀಡುವಂತೆ ಕೋರಿ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದೆ.
ಈ ಸಂಬಂಧ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್.ಭಾಸ್ಕರ್ ಮಾತನಾಡಿ, 18 ಸೆಪ್ಟೆಂಬರ್ 1949ರಂದು ಸಂವಿಧಾನ ರಚನಾ ಸಭೆಯು ಸಂವಿಧಾನದ 1ನೇ ವಿಧಿಯನ್ನು ಅಂಗೀಕರಿಸಿತು. ಈ ಪ್ರಯುಕ್ತ ಸಂವಿಧಾನ ಸೌಹಾರ್ದ ರಥಯಾತ್ರೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಅಂದು ಮಧ್ಯಾಹ್ನ 3.30 ಗಂಟೆಗೆ ಟಿ.ನರಸೀಪುರ ಪಟ್ಟಣದ ವಿದ್ಯಾನಗರದಿಂದ ಹೊರಟು ಪೊಲೀಸ್ ಸ್ಟೇಷನ್ ಮೂಲಕ ವಿದ್ಯೋದಯ ಸರ್ಕಲ್, ಪ್ರೈವೇಟ್ ಬಸ್ ಸ್ಟ್ಯಾಂಡ್, ಲಿಂಕ್ ರಸ್ತೆ, ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್, ಮೂಲಕ ತೆರಳಿ ಗುಂಜಾಂ ನರಸಿಂಹಸ್ವಾಮಿ ದೇವಾಲಯದಲ್ಲಿ ಸಮಾವೇಶಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ರಥಯಾತ್ರೆಯಲ್ಲಿ 5 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.




