ಟಿ. ನರಸೀಪುರ: ಹಾಡಹಗಲೇ ಯುವಕನ ಬರ್ಬರ ಕೊಲೆ; ಠಾಣೆಗೆ ಹಾಜರಾದ ಮೂವರು ಆರೋಪಿಗಳು

ಮೈಸೂರು,ಸೆ.26: ಯುವಕೊನರ್ವನನ್ನು ಹಾಡುಹಗಲೇ ಡ್ರ್ಯಾಗನ್ ನಿಂದ ಇರಿದು ಕೊಲೆ ಮಾಡಿ ಮೂವರು ಆರೋಪಿಗಳು ಪೊಲಿಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ಟಿ.ನರಸೀಪುರದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಕೊಲೆಯಾದ ಯುವಕ ಸುಭಾಷ್ (34) ಎಂದು ಗುರುತಿಸಲಾಗಿದ್ದು, ಈತ ಅಲಗೂಡು ಗ್ರಾಮದವನು ಎನ್ನಲಾಗಿದೆ. ಇಂದು ಬೆಳಿಗ್ಗೆ 9.30 ಗಂಟೆ ಸಮಯದಲ್ಲಿ ಟಿ.ನರಸೀಪುರದ ವಿವೇಕನಗರದಲ್ಲಿ ಅದೇ ಗ್ರಾಮದ ಮೂವರು ಯುವಕರು ಡ್ರ್ಯಾಗನ್ ಮತ್ತು ಚೂರಿಯಿಂದ ಇರಿದು ಕೊಂದಿದ್ದಾರೆ. ಮೇಲ್ನೋಟಕ್ಕೆ ಆಸ್ತಿ ವಿಚಾರಕ್ಕೆ ಈ ಕೊಲೆ ನಡೆದಿದೆ ಎಂದು ಶಂಸಲಾಗಿದೆ.
ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ , ಕೊಲೆಯಾದ ಸುಭಾಷ್ ಮತ್ತು ಆತನ ತಂದೆ ನಡುವೆ ಆಸ್ತಿ ವಿಚಾರಕ್ಕೆ ಕಳೆದ ವರ್ಷ ಗಲಾಟೆಯಾಗಿ ಸುಭಾಷ್ ತನ್ನ ತಂದೆಯ ಕೊಲೆಗೆ ಯತ್ನಿಸಿದ್ದ. ಈ ಸಂಬಂಧ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ತಂದೆ ಮತ್ತು ಮಗನ ನಡುವೆ ರಾಜಿ ಮಾಡಿಸಲು ಮೂವರು ಯುವಕರು ಸುಭಾಷ್ ನಿಂದ ಹಣ ಪಡೆದಿದ್ದರು ಎನ್ನಲಾಗಿದೆ. ಬಹಳ ದಿನಗಳು ಕಳೆದರೂ ರಾಜಿ ಮಾಡಿಸದ ಕಾರಣಕ್ಕೆ ಈ ಕೊಲೆ ನಡೆದಿದೆ ಎಂದು ತಿಳಿದು ಬಂದಿದ್ದು, ತನಿಖೆ ನಂತರ ಸ್ಪಷ್ಟ ಮಾಹಿತಿ ಗೊತ್ತಾಗಲಿದೆ ಎಂದು ಹೇಳಿದರು.
ಈ ಸಂಬಂಧ ಟಿ.ನರಸೀಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.






