ಯದುವಂಶದ ಮಹಾರಾಜರು ಪಟ್ಟದಲ್ಲಿ ಇಲ್ಲದಿದ್ದಾಗ ʼದಸರಾʼ ಮುನ್ನಡೆಸಿದ್ದು ಟಿಪ್ಪು ಸುಲ್ತಾನ್ : ಶಾಸಕ ತನ್ವೀರ್ ಸೇಠ್

ಮೈಸೂರು, ಆ.25 : ʼದಸರಾ ಉತ್ಸವ ಜಾತಿ- ಧರ್ಮಕ್ಕೆ ಸೀಮಿತವಾಗಿಲ್ಲ, ವ್ಯಕ್ತಿಯ ಸ್ಥಾನಮಾನ ಗುರುತಿಸಿ ದಸರಾ ಉದ್ಘಾಟನೆಗೆ ಕರೆಯುತ್ತೇವೆʼ ಎಂದು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆಯನ್ನು ಶಾಸಕ ತನ್ವೀರ್ ಸೇಠ್ ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯದುವಂಶದ ಮಹಾರಾಜರು ಪಟ್ಟದಲ್ಲಿ ಇಲ್ಲದಿದ್ದ ಸಂದರ್ಭದಲ್ಲಿ ದಸರಾವನ್ನು ಮುನ್ನಡೆಸಿದ್ದು ಹೈದರಾಲಿ ಹಾಗೂ ಟಿಪ್ಪು ಸುಲ್ತಾನ್ ಇದನ್ನು ಮರೆಯಬಾರದು ಎಂದು ಹೇಳಿದರು.
ಕಾದಂಬರಿಕಾರ ಎಸ್.ಎಲ್.ಭೈರಪ್ಪ ಉದ್ಘಾಟನೆ ಮಾಡುವ ವೇಳೆ ನಾವು ಯಾರು ವಿರೋಧ ಮಾಡಲಿಲ್ಲ. ಇದು ಜಾತಿ-ಧರ್ಮಕ್ಕೆ ಸೀಮಿತವಾದುದಲ್ಲ, ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿಯೇ ದಸರಾ ಉದ್ಘಾಟನೆ ಮಾಡುತ್ತೇವೆ. ನಮ್ಮ ನಂಬಿಕೆ ಏನು ಎಂಬುದನ್ನು ಎಲ್ಲರಿಗೂ ತೋರಿಸಲು ಸಾಧ್ಯವಿಲ್ಲ ಎಂದರು.
ಸದನದಲ್ಲಿ ಡಿ.ಕೆ.ಶಿವಕುಮಾರ್ ಆರೆಸ್ಸೆಸ್ ಗೀತೆ ಹಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ತನ್ವೀರ್ ಸೇಠ್, ಬೇರೆ ರಾಜಕೀಯ ಪಕ್ಷದ ಸಿದ್ಧಾಂತ ಅರ್ಥಮಾಡಿಕೊಂಡರೆ ತಪ್ಪೇನಿದೆ. ಡಿ.ಕೆ.ಶಿವಕುಮಾರ್ ಆರೆಸ್ಸೆಸ್ ಗೀತೆ ಹಾಡಿದರೆ ಬಿಜೆಪಿ ಪರ ಎಂದರ್ಥವಲ್ಲ, ಈ ಬಗ್ಗೆ ಕೆ.ಎನ್.ರಾಜಣ್ಣ ಟೀಕೆ ಮಾಡಿರುವುದು ಸರಿಯಲ್ಲ. ಈ ರೀತಿಯ ಹೇಳಿಕೆಗಳಿಂದಲೇ ಅವರು ನಷ್ಟ ಅನುಭವಿಸಿದ್ದಾರೆ ಎಂದು ಹೇಳಿದರು.
ಧರ್ಮಸ್ಥಳದ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು, ಎಸ್.ಐ.ಟಿ. ತನಿಖೆ ಸರಿ-ತಪ್ಪು ಎಂದು ಹೇಳುವುದು ಸರಿಯಲ್ಲ. ದೂರುದಾರನ ಮಂಪರು ಪರೀಕ್ಷೆ ಅಗತ್ಯವಿದೆ. ಇಂತದೊಂದು ದೊಡ್ಡ ಧಾರ್ಮಿಕ ಸಂಸ್ಥೆ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ಇದರ ಹಿಂದೆ ಯಾರದೋ ಕೈವಾಡವಿದೆ. ಅದು ಯಾರೇ ಆದರು ಅವರಿಗೆ ಶಿಕ್ಷೆ ಆಗಬೇಕು. ಇಂತಹ ಕೆಲಸ ಮಾಡುವವರಿಗೆ ಜಾತಿ-ಧರ್ಮ ಇರುವುದಿಲ್ಲ ಎಂದು ಹೇಳಿದರು.







