ಮೈಸೂರು | ಹುಲಿ ದಾಳಿ; ಜಮೀನಿನಲ್ಲಿ ಜಾನುವಾರು ಮೇಯಿಸುತ್ತಿದ್ದ ರೈತ ಮೃತ್ಯು

ಮೈಸೂರು : ಜಮೀನಿನಲ್ಲಿ ಜಾನುವಾರು ಮೇಯಿಸುತ್ತಿದ್ದ ರೈತನ ಮೇಲೆ ಹುಲಿ ದಾಳಿ ನಡೆಸಿದ ಪರಿಣಾಮ ರೈತ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ ಸರಗೂರು ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಮುಳ್ಳೂರು ಗ್ರಾಮದ ರಾಜಶೇಖರ ಮೂರ್ತಿ (55) ಹುಲಿ ದಾಳಿಗೆ ಒಳಗಾಗಿ ಮೃತಪಟ್ಟ ರೈತ. ರವಿವಾರ ಮಧ್ಯಾಹ್ನ 1.30 ಗಂಟೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಮುಳ್ಳೂರು ಗ್ರಾಮದ ಸಮೀಪ ಯಾವುದೇ ಕಾಡು ಪ್ರದೇಶ ಇಲ್ಲದಿದ್ದರೂ ಹುಲಿ ದಾಳಿ ಸಾರ್ವಜನಿಕರಲ್ಲಿ ಆತಂಕ ಸೃಷ್ಠಿ ಮಾಡಿದೆ. ರೈತ ರಾಜಶೇಖರ್ ತಮ್ಮ ಜಮೀನಿನಲ್ಲಿ ಜಾನುವಾರು ಮೇಯಿಸುತ್ತಿದ್ದರು. ಮಧ್ಯಾಹ್ನ 1.30 ಗಂಟೆ ಸಮಯದಲ್ಲಿ ಹುಲಿ ಏಕಾಏಕಿ ಇವರ ಮೇಕೆ ದಾಳಿ ನಡೆಸಿದೆ. ಬಳಿಕ ಎಳೆದೊಯ್ಯಲು ಯತ್ನಿಸಿ ವಿಫಲವಾಗಿದೆ.
ಹುಲಿ ದಾಳಿ ಮಾಡುತ್ತಿದ್ದಂತೆ ಮೃತ ರಾಜಶೇಖರ್ ಚೀರಾಟ ನಡೆಸಿದ್ದಾರೆ. ಅವರ ಚೀರಾಟ ಗಮನಿಸಿದ ಅಕ್ಕ ಪಕ್ಕದ ಜಮೀನಿನವರು ಸ್ಥಳಕ್ಕೆ ಬರುವಷ್ಟರಲ್ಲಿ ಹುಲಿ ದಾಳಿ ನಡೆಸಿ ಓಡಿ ಹೋಗಿದೆ.
ಘಟನೆ ಹಿನ್ನಲೆ ಮುಳ್ಳೂರು ಮತ್ತು ಸುತ್ತಮುತ್ತಲು ಗ್ರಾಮದ ರೈತರು ಸಾರ್ವಜನಿಕರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮುಳ್ಳೂರು ಗ್ರಾಮದ ಸಮೀಪ ಯಾವುದೇ ಕಾಡು ಪ್ರದೇಶ ಇಲ್ಲದಿದ್ದರೂ ಹುಲಿ ದಾಳಿ ಆತಂಕ ಸೃಷ್ಟಿಸಿದೆ. ಬಡಗಲಪುರ ಗ್ರಾಮದಲ್ಲಿ ಓರ್ವ ರೈತನನ್ನ ಬಲಿ ಪಡೆದ ಬೆನ್ನ ಹಿಂದೆಯೇ ದಸರಾ ಆನೆಗಳ ನೆರವಿನಿಂದ ಕೂಂಬಿಗ್ ಕಾರ್ಯಾಚರಣೆ ನಡೆಸಿ ಹುಲಿಯನ್ನ ಸೆರೆ ಹಿಡಿಯಲಾಗಿತ್ತು. ಹುಲಿ ಸೆರೆಯಾದ ಹಿನ್ನಲೆ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದರು. ಇದೀಗ ಮತ್ತೊಂದು ಬಲಿ ಪಡೆದಿರುವುದು ಸ್ಥಳೀಯರ ನಿದ್ದೆ ಕೆಡಿಸಿದೆ. ನರಹಂತಕ ಹುಲಿಯನ್ನು ಗುರುತಿಸಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಡಿಸಿದ್ದಾರೆ.
ಶಾಸಕ ಅನಿಲ್ ಚಿಕ್ಕಮಾದುಗೆ ಗ್ರಾಮಸ್ಥರ ತರಾಟೆ:
ಹುಲಿ ದಾಳಿಗೆ ಸರಗೂರು ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ರೈತ ಬಲಿಯಾದ ಪ್ರಕರಣದ ಹಿನ್ನಲೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅನಿಲ್ ಚಿಕ್ಕಮಾದುಗೆ ಗ್ರಾಮಸ್ಥರು ತರಾಟೆಗೆ ತೆಗದುಕೊಂಡ ಘಟನೆ ನಡೆದಿದೆ.
ಸ್ಥಳಕ್ಕೆ ರವಿವಾರ ಮಧ್ಯಾಹ್ನ ಆಗಮಿಸಿದ ಶಾಸಕ ಅನಿಲ್ ಚಿಕ್ಕಮಾದು ಸುತ್ತುವರಿದ ಗ್ರಾಮಸ್ಥರು ತಮಗೆ ರಕ್ಷಣೆ ಇಲ್ಲದ ಪರಿಸ್ಥಿತಿಯನ್ನು ವಿವರಿಸಿದರು. ನರಹಂತಕ ಹುಲಿ ಸೆರೆ ಹಿಡಿಯುವ ವಿಚಾರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲವಾಗಿದ್ದಾರೆ. ಘಟನೆ ನಡೆದು ಗಂಟೆಗಳು ಉರುಳಿದರೂ ಯಾವೊಬ್ಬ ಅಧಿಕಾರಿ ಇತ್ತ ಸುಳಿದಿಲ್ಲವೆಂದು ಗ್ರಾಮಸ್ಥರು ಆರೋಪಿಸಿದರು.







