ರಾಹುಲ್ ಗಾಂಧಿ ದೇಶದಲ್ಲಿರಲು ನಾಲಾಯಕ್: ಕೇಂದ್ರ ಸಚಿವ ವಿ.ಸೋಮಣ್ಣ ವಾಗ್ದಾಳಿ

ಕೇಂದ್ರ ಸಚಿವ ವಿ.ಸೋಮಣ್ಣ
ಮೈಸೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಫೋಟೊ ಪೊಲೀಸ್ ಠಾಣೆಯಲ್ಲಿ ಹಾಕಿರುವ ಬಗ್ಗೆ ಮಾತನಾಡಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ದೇಶದಲ್ಲಿರಲು ನಾಲಾಯಕ್ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಠಾಣೆಯಲ್ಲಿ ಅಮಿತ್ ಶಾ ಫೋಟೋ ನೋಡಿ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ರಾಹುಲ್ ಗಾಂಧಿಗೆ ಈ ದೇಶದ ಇತಿಹಾಸ, ಸಂಸ್ಕೃತಿ ಏನು ಗೊತ್ತಿಲ್ಲ, 10 ದಿನ ಭಾರದಲ್ಲಿ 20 ದಿನ ವಿದೇಶದಲ್ಲಿರುತ್ತಾರೆ. ಇವರಿಗೆ ಇಲ್ಲಿನ ಕಾನೂನು ತಿಳಿದಿಲ್ಲ ಎಂದರು.
ಅಮಿತ್ ಶಾ ಫೋಟೊ ಹಾಕದೆ ಇನ್ಯಾರ ಫೋಟೊ ಹಾಕಬೇಕಿತ್ತು? ನಿಮ್ಮ ಅಪ್ಪ, ತಾತ, ಅಜ್ಜಿ, ಫೋಟೋ ಹಾಕಿರಲಿಲ್ವಾ? ರಾಜ್ಯದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಫೋಟೋ ಹಾಕಿಲ್ವಾ ? ಅಮಿತ್ ಶಾ ದೇಶದ ನಕ್ಸಲಿಸಂನ ಹೊಸಕಿ ಹಾಕಿದ್ದಾರೆ. ಅವರನ್ನು ಟೀಕಿಸುವ ಶಕ್ತಿ ನಿಮ್ಮಲ್ಲಿಲ್ಲ ಎಂದು ಹೇಳಿದರು.
ಕಾಂಗ್ರೆಸ್ 70 ವರ್ಷಗಳಿಂದ ಮಾಡಿದ ಪಾಪವನ್ನು ಬಿಜೆಪಿ 12 ವರ್ಷದಿಂದ ತೊಳೆಯುತ್ತಿದೆ. ಇದಕ್ಕಾದರೂ ರಾಹುಲ್ ಗಾಂಧಿ ಕೃತಘ್ನತೆ ಹೇಳಬೇಕಿತ್ತು. ಯಾರನ್ನೊ ಹಿಡಿದುಕೊಂಡು ಏನೊ ಅಗಿಬಿಡುತ್ತೇನೆ ಎಂದು ರಾಹುಲ್ ಗಾಂಧಿ ಹೊರಟರೆ ಅದರಿಂದ ಏನೂ ಪ್ರಯೋಜನ ಇಲ್ಲ ಎಂದು ಹೇಳಿದರು.
ರಾಜ್ಯ ರಾಜಕೀಯಕ್ಕೆ ಬರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಸೋಮಣ್ಣ, "ನನಗೆ ದೇಶ ಮುಖ್ಯ. ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ. ವರಿಷ್ಠರು ಹೇಳಿದ್ದನ್ನು ಮಾಡುತ್ತಿದ್ದೇನೆ. ರಾಜ್ಯದಲ್ಲಿ ಅನೇಕ ಬುದ್ಧಿವಂತರಿದ್ದಾರೆ. ಪಕ್ಷವು ಬಲವಾಗಿದೆ, ರಾಜ್ಯ ರಾಜಕೀಯಕ್ಕೆ ಬರುವ ಬಗ್ಗೆ ಸದ್ಯಕ್ಕೇನು ಹೇಳಲ್ಲ. ಎಲ್ಲವೂ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಹೇಳಿದರು.
ಮಂಗಳೂರು ರೈಲ್ವೆಯನ್ನು ಕೇರಳದ ಪಾಲಕ್ಕಾಡ್ ವಿಭಾಗದಿಂದ ಮೈಸೂರಿಗೆ ಸೇರಿಸಿದ ವಿಚಾರದ ಬಗ್ಗೆ ಮಾತನಾಡಿದ ಅವರು, "ಕಳೆದ 22 ವರ್ಷಗಳಿಂದ ನಮ್ಮ ಭಾಗ ಕೇರಳಕ್ಕೆ ಸೇರಿತ್ತು. ಮಂಗಳೂರು ಭಾಗದ ಸಂಸದರು ಮನವಿ ಮಾಡಿದ್ದರು. ಕೆಲ ವರ್ಷಗಳಿಂದ ಅನೇಕ ನಾಯಕರು ಮಂಗಳೂರು ರೈಲ್ವೆ ವಿಭಾಗವನ್ನು ನಮ್ಮಲ್ಲೇ ಇರಲಿ ಎಂದಿದ್ದರು. ನಾನು ಕೇಂದ್ರ ಸಚಿವರ ಜೊತೆ ಮಾತನಾಡಿ ಮಂಗಳೂರು ಭಾಗವನ್ನು ಮೈಸೂರಿಗೆ ಸೇರಿಸಿದ್ದೇನೆ. ಇದರಿಂದ ರಾಜ್ಯದ ಅನೇಕರಿಗೆ ಉದ್ಯೋಗ ಸಿಗುತ್ತೆ. ಜನರಿಗೆ ಅನುಕೂಲ ಆಗುತ್ತದೆ. ಈ ಸಂಬಂಧ ಕೇರಳ ಸಿಎಂ ಸೇರಿ ಅನೇಕರು ವಿರೋಧ ಮಾಡಿದ್ದಾರೆ, ಆದರೆ ಟೆಕ್ನಿಕಲ್ ಟೀಮ್ ಮಾಡಿ ವರದಿ ತರಿಸಿ ಇದನ್ನು ಮಾಡಿದ್ದೇವೆ" ಎಂದು ವಿ.ಸೋಮಣ್ಣ ಸ್ಪಷ್ಪಡಿಸಿದರು.






