ಸರಕಾರದ ವತಿಯಿಂದ ಯಾಕೆ ಮಹಿಷಾ ದಸರಾ ಆಚರಿಸುವುದಿಲ್ಲ?: ಜ್ಞಾನಪ್ರಕಾಶ್ ಸ್ವಾಮೀಜಿ ಪ್ರಶ್ನೆ

ಮೈಸೂರು: ಸರಕಾರದ ವತಿಯಿಂದ ಯಾಕೆ ಮಹಿಷಾ ದಸರಾ ಆಚರಿಸುವುದಿಲ್ಲ ಎಂದು ಗಾಂಧಿನಗರದ ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಪ್ರಶ್ನಿಸಿದ್ದಾರೆ.
ನಗರದ ಪುರಭವನದ ಆವರಣದಲ್ಲಿ ಬುಧವಾರ ಮಹಿಷಾ ದಸರಾ ಆಚರಣಾ ಸಮಿತಿಯಿಂದ ನಡೆದ ಮಹಿಷ ಮಂಡಲೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸರಕಾರ ದಸರಾ ಆಚರಣೆಗೆ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ಯಾವ್ಯಾವುದೋ ಸಂಭ್ರಮ ಮಾಡುತ್ತಿದೆ. ಈ ನೆಲದ ಮೂಲ ನಿವಾಸಿ ಮಹಿಷಾನನ್ನು ಯಾಕೆ ಸ್ಮರಿಸುವುದಿಲ್ಲ. ಮಹಿಷಾನ ಹೆಸರಿನಲ್ಲಿ ವಿಚಾರ ಸಂಕಿರಣ ಯಾಕೆ ಮಾಡಲಾಗುವುದಿಲ್ಲ ಎಂದು ಪ್ರಶ್ನಿಸಿದರು.
ನಾಡಹಬ್ಬಕ್ಕೆ ಖರ್ಚು ಮಾಡುವುದು ತೆರಿಗೆ ಹಣವಾದ್ದರಿಂದ ಮಹಿಷಾನನ್ನು ಸ್ಮರಿಸಬೇಕು. ಸರಕಾರದ ವತಿಯಿಂದಲೇ ಮಹಿಷಾ ದಸರಾ ಆಚರಿಸಬೇಕು ಎಂದು ಒತ್ತಾಯಿಸಿದರು.
ಈಚೆಗೆ ಲೇಖಕ ಕೃಷ್ಣಮೂರ್ತಿ ಅವರ ಮಹಿಷಾ ಮರ್ದಿನಿ ಕೃತಿ ಬಿಡುಗಡೆಯಾಗಿದೆ. ಗೆಜೆಟಿಯರ್, ಬ್ರಿಟಿಷರ್ ಲೇಖಕರು ಬರೆದಿರುವುದು ಸುಳ್ಳು. ಎಮ್ಮೆಯಿಂದ ಮೈಸೂರಿಗೆ ಹೆಸರು ಬಂದಿದೆ ಎಂದು ಉಲ್ಲೇಖಿಸಿದ್ದಾರೆ. ಹಾಗಾದರೆ ಎಮ್ಮೆ ಸಾಕುತ್ತಿದ್ದವರು ಯಾರು? ಕೋಣ ಯಾರ ಸಂಕೇತ? ಎಂದು ಪ್ರಶ್ನಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಲೇಖಕ ಸಿದ್ದಸ್ವಾಮಿ, ಮಹಿಷಾಸುರ ಮೈಸೂರು ಅಸ್ಮಿತೆ. ಮೌಢ್ಯತೆಯ ವಿರೋಧಿ. ಯಾರೊಂದಿಗೂ ವೈರತ್ವ ತಾಳಲು ಮಹಿಷಾ ದಸರಾ ಆಚರಿಸುತ್ತಿಲ್ಲ ನಮ್ಮ ಅಸ್ತಿತ್ವ ಕಂಡುಕೊಳ್ಳಲು ಆಚರಿಸುತ್ತಿದ್ದೇವೆ ಎಂದರು.
ನಿವೃತ್ತ ಡಿಸಿಪಿ ಸಿದ್ದರಾಜು ಮಾತನಾಡಿ, ಸರಕಾರ ಚಿನ್ನದ ಅಂಬಾರಿಯಲ್ಲಿ ಸಂವಿಧಾನ ಪ್ರತಿ ಇಟ್ಟು ಮೆರವಣಿಗೆ ಮಾಡಬೇಕು ಎಂದು ಹೇಳಿದರು.
ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ಮಾತನಾಡಿ, ಸರ್ವ ಸಮಾನತೆ ಮನುಷ್ಯತ್ವ ಎತ್ತಿ ಹಿಡಿಯುವುದೇ ಧರ್ಮ. ಬುದ್ಧ ಕೊಟ್ಟ ಚಿಂತನೆ ಜಗತ್ತಿಗೆ ಬೇಕಾಗಿದೆ. ಸ್ವತಂತ್ರವಾದ ಆಲೋಚನೆ ಇದ್ದವರು ಬುದ್ಧರನ್ನು ಒಪ್ಪಿದ್ದಾರೆ. ಶೂದ್ರರು ಸ್ವಾಭಿಮಾನಿಗಳಾಗಬೇಕು ಎಂದು ತಿಳಿಸಿದರು.
ಲೇಖಕ ದೀಲಿಪ್ ನರಸಯ್ಯ ಮಾತನಾಡಿ, ಸಂಸ್ಕೃತದಲ್ಲಿ ಮಹಿಷ ಎಂದರೆ ಶ್ರೇಷ್ಠ, ಬಲಿಷ್ಠ ಎಂದರ್ಥವಿರುವ ರಾಕ್ಷಸ ಹೇಗಾದ? ಯಾವ ರೀತಿ ನರ ಭಕ್ಷಕನಾದ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದರು.
ಮೈಸೂರಿನಿಂದ ಮಹಿಷ ಕುಲ ಬಂದಿಲ್ಲ, ಮಹಿಷ ಕುಲದಿಂದ ಮೈಸೂರು ಆಗಿರುವುದು. ಮಹಿಷ ಕುಲದ ಪ್ರಮುಖರು ಈಗಲೂ ಇದ್ದಾರೆ. ಊಟಿ (ನೀಲಗಿರಿ)ಯ ತೊಡರು ಸಮುದಾಯದವರು ಮಹಿಷನ ವಂಶಸ್ಥರು. ಆದರೆ ಕಲವರು ಮಹಿಷ ಮಂಡಲ ಇಲ್ಲ ಎಂದು ಹೇಳುತ್ತಾರೆ. ಅದು ಸಂಪೂರ್ಣ ಸುಳ್ಳು. ಮಹಿಷ ಮಂಡಲ ಇತ್ತು ಎಂಬುದಕ್ಕೆ ಗೆಜೆಟಿಯರ್ ನಲ್ಲೇ ದಾಖಲೆ ಇದೆ.
-ಸಿದ್ದಸ್ವಾಮಿ,ಲೇಖಕ
ನಮ್ಮ ಧಾರ್ಮಿಕ ಆಚರಣೆಗೆ ಸಂವಿಧಾನದಲ್ಲೇ ಅವಕಾಶವಿದ್ದರೂ, ಚಾಮುಂಡಿ ಬೆಟ್ಟದ ಮಹಿಷ ಪ್ರತಿಮೆ ಬಳಿ ನಮಗೆ ಹೋಗಲು ಬಿಡದೆ ಅವಮಾನಿಸಲಾಗುತ್ತಿದೆ.ಮಹಿಷನ ಆಚರಣೆ ಮಾಡುವ ಬುದ್ದಿಜೀವಿಗಳು, ಪ್ರಗತಿಪರರು, ಮೂಲ ನಿವಾಸಿಗಳು ಢಕಾಯಿತರಲ್ಲ, ಬುದ್ಧ, ಅಂಬೇಡ್ಕರ್ ವಾದಿಗಳು, ಯಾರಿಗೂ ನಮ್ಮನ್ನು ತಡೆಯುವ ನೈತಿಕ ಶಕ್ತಿ ಇಲ್ಲ. ಚಾಮುಂಡಿ ಬೆಟ್ಟದ ಮಹಿಷನ ಪ್ರತಿಮೆ ಬಳಿ ೧೪೪ ನೇ ಸೆಕ್ಷನ್ ಜಾರಿ ಮಾಡಿ ಸಾಂಸ್ಕೃತಿಕ ಹಬ್ಬಕ್ಕೆ ಅವಮಾನ ಮಾಡುತ್ತಿದ್ದೀರಿ.
-ಪುರುಷೋತ್ತಮ್,ಅಧ್ಯಕ್ಷ, ಮಹಿಷ ದಸರಾ ಆಚರಣ ಸಮಿತಿ
ಎಲ್ಲ ಪುರಾಣಗಳಲ್ಲಿ ಬುದ್ಧರ ಉಲ್ಲೇಖವಿದೆ: ಕೊಳತ್ತೂರು ಟಿ.ಎಸ್.ಮಣಿ
ಬುದ್ಧ ಜನರಲ್ಲಿದ್ದ ಮೂಢನಂಬಿಕೆಗಳನ್ನು ಹೊಗಲಾಡಿಸಲು ಶ್ರಮಿಸಿದರು. ರಾಮಾಯಣ ಸೇರಿದಂತೆ ಎಲ್ಲ ಪುರಾಣಗಳಲ್ಲಿ ಬುದ್ಧರ ಉಲ್ಲೇಖವಿದೆ. ರಾಮಾಯಣದಲ್ಲಿ ಹನುಮಂತ ಹಾರಿದಾಗ ಬುದ್ಧ ವಿಹಾರಗಳು ಕಾಣುತ್ತಿದ್ದವು ಎಂದು ಬರೆದಿದ್ದಾರೆ. ಹೀಗಾಗಿ, ಬುದ್ಧನ ನಂತರವೇ ಪುರಾಣಗಳನ್ನು ರಚಿಸಲಾಗಿದೆ. ಪುರಾಣಗಳಲ್ಲಿ ಬರುವ ಎಲ್ಲ ಕಥೆಗಳು, ಘಟನೆಗಳು ಎಲ್ಲವೂ ನಿಜವಲ್ಲ. ನಡೆದಂತಹ ಘಟನೆಗಳಿಗೆ ರೆಕ್ಕೆ ಪುಕ್ಕಾ ಸೇರಿಸಿ ಸುಳ್ಳು ಪುರಾಣಗಳನ್ನು ರಚಿಸಲಾಗಿದೆ ಎಂದು ತಮಿಳುನಾಡಿನ ಪೆರಿಯಾರ್ ಚಳುವಳಿ ಹೋರಾಟಗಾರ ಕೊಳತ್ತೂರು ಟಿ.ಎಸ್.ಮಣಿ ತಿಳಿಸಿದರು.







