ತುರ್ತು ಪರಿಸ್ಥಿತಿಗೆ ಕಾರಣವಾದ ಕಾಂಗ್ರೆಸ್ ನ ಮನಸ್ಥಿತಿ ಈಗಲೂ ಜೀವಂತವಾಗಿದೆ: ಪ್ರಧಾನಿ ಮೋದಿ ವಾಗ್ದಾಳಿ

ನರೇಂದ್ರ ಮೋದಿ | PC : X \ @narendramodi
ಹೊಸ ದಿಲ್ಲಿ: ತುರ್ತು ಪರಿಸ್ಥಿತಿಯು ಕರಾಳ ದಿನವಾಗಿತ್ತು ಹಾಗೂ ಕಾಂಗ್ರೆಸ್ ಹೇಗೆ ಮೂಲಭೂತ ಸ್ವಾತಂತ್ರ್ಯವನ್ನು ಹತ್ತಿಕ್ಕಿತು. ಎಲ್ಲ ಭಾರತೀಯರೂ ಅಪಾರವಾಗಿ ಗೌರವಿಸುವ ಸಂವಿಧಾನವನ್ನು ತಿರುಚಿತು ಎಂಬುದರ ನೆನಪಾಗಿದೆ ಎಂದು ತುರ್ತು ಪರಿಸ್ಥಿತಿಯ 49ನೇ ವಾರ್ಷಿಕೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಮೋದಿ, ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ಸಿಗರಿಗೆ ಸಂವಿಧಾನದ ಬಗ್ಗೆ ಪ್ರೀತಿ ವ್ಯಕ್ತಪಡಿಸಲು ಯಾವುದೇ ಹಕ್ಕಿಲ್ಲ ಎಂದು ಪ್ರಮುಖ ವಿರೋಧ ಪಕ್ಷಕ್ಕೆ ತಿರುಗೇಟು ನೀಡಿದ್ದಾರೆ.
"ಅಸಂಖ್ಯಾತ ಬಾರಿ 356ನೇ ವಿಧಿ ಹೇರಿದವರು ಇವರೇ ಆಗಿದ್ದಾರೆ. ಪತ್ರಿಕಾ ಸ್ವಾತಂತ್ರ್ಯವನ್ನು ದಮನ ಮಾಡಲು ಮಸೂದೆಯೊಂದನ್ನು ತಂದರು. ಒಕ್ಕೂಟ ವ್ಯವಸ್ಥೆಯನ್ನು ಹಾಳುಗೆಡವಿದರು ಹಾಗೂ ಸಂವಿಧಾನದ ಎಲ್ಲ ಆಶಯಗಳನ್ನು ಉಲ್ಲಂಘಿಸಿದರು" ಎಂದು ಅವರು ಕಿಡಿ ಕಾರಿದ್ದಾರೆ.
Those who imposed the Emergency have no right to profess their love for our Constitution. These are the same people who have imposed Article 356 on innumerable occasions, got a Bill to destroy press freedom, destroyed federalism and violated every aspect of the Constitution.
— Narendra Modi (@narendramodi) June 25, 2024
"ತುರ್ತು ಪರಿಸ್ಥಿತಿ ಹೇರಲು ಕಾರಣವಾದ ಮನಸ್ಥಿತಿಯು ತುರ್ತು ಪರಿಸ್ಥಿತಿಯನ್ನು ಹೇರಲು ಕಾರಣವಾದ ಪಕ್ಷದಲ್ಲಿ ಈಗಲೂ ಜೀವಂತವಾಗುಳಿದಿದೆ. ಅವರು ತಮ್ಮ ಟೋಕನಿಸಂ ಮೂಲಕ ಸಂವಿಧಾನದೆಡೆಗಿನ ತಮ್ಮ ತಿರಸ್ಕಾರವನ್ನು ಬಚ್ಚಿಟ್ಟುಕೊಳ್ಳುತ್ತಿದ್ದಾರೆ. ಆದರೆ, ಭಾರತೀಯರು ಅವರ ನಾಟಕಗಳನ್ನು ನೋಡಿದ್ದಾರೆ. ಹೀಗಾಗಿಯೇ ಅವರು ಮತ್ತೆ ಮತ್ತೆ ಅವರನ್ನು ತಿರಸ್ಕರಿಸುತ್ತಿದ್ದಾರೆ" ಎಂದು ಮೋದಿ ಬರೆದುಕೊಂಡಿದ್ದಾರೆ.