ನೀಟ್ ಪರೀಕ್ಷೆ ಅಕ್ರಮ ; ಇಬ್ಬರ ಬಂಧನ

ಸಾಂದರ್ಭಿಕ ಚಿತ್ರ
ಪಾಟ್ನಾ: ನೀಟ್-ಯುಜಿ ಪರೀಕ್ಷೆಗಳಲ್ಲಿ ಅಕ್ರಮ ಆರೋಪದ ಕುರಿತ ತನಿಖೆಗೆ ಸಂಬಂಧಿಸಿ ಸಿಬಿಐ ಪಾಟ್ನಾದಿಂದ ಗುರುವಾರ ಇಬ್ಬರನ್ನು ಬಂಧಿಸಿದೆ.
ಬಿಹಾರದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದ ಆರೋಪದಲ್ಲಿ ಪಾಟ್ನಾದಿಂದ ಮನೀಶ್ ಪ್ರಕಾಶ್ ಹಾಗೂ ಅಶುತೋಷ್ನನ್ನು ಸಿಬಿಐ ಬಂಧಿಸಿದೆ. ಇವರ ಮೂಲಕ 24ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸೋರಿಕೆಯಾದ ಪ್ರಶ್ನೆ ಪತ್ರಿಕೆ ಲಭ್ಯವಾಗಿತ್ತು ಎಂದು ಹೇಳಲಾಗಿದೆ.
ಮನೀಷ್ ಕುಮಾರ್ ವಿದ್ಯಾರ್ಥಿಗಳನ್ನು ತನ್ನ ಕಾರಿನಲ್ಲಿ ಕರೆದೊಯ್ಯಲು ಹಾಗೂ ಕನಿಷ್ಠ 24ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸೋರಿಕೆಯಾದ ಪ್ರಶ್ನೆ ಪತ್ರಿಕೆಯನ್ನು ನೀಡಲು, ಅದನ್ನು ಮನನ ಮಾಡಲು ಖಾಲಿ ಶಾಲೆಯೊಂದರಲ್ಲಿ ಅವಕಾಶ ಕಲ್ಪಿಸಿದ್ದ. ಅಶುತೋಷ್ ಈ ವಿದ್ಯಾರ್ಥಿಗಳಿಗೆ ತನ್ನ ನಿವಾಸದಲ್ಲಿ ವಾಸ್ತವ್ಯ ಕಲ್ಪಿಸಿದ್ದ ಎಂದು ತನಿಖೆಯ ಬೆಳವಣಿಗೆಯ ಬಗ್ಗೆ ಮಾಹಿತಿ ಇರುವ ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರಂಭದಲ್ಲಿ ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ಸಮನ್ಸ್ ನೀಡಲಾಯಿತು. ಅನಂತರ ಅವರನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಮಹಾರಾಷ್ಟ್ರ ಸರಕಾರ ರಾಜ್ಯದ ನೀಟ್ ಸಂಬಂಧಿತ ಎಲ್ಲಾ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲು ನಿರ್ಧರಿಸಿದೆ.





