ನೂತನ ಕ್ರಿಮಿನಲ್ ಕಾಯ್ದೆಗಳ ಜಾರಿ ವಿರುದ್ಧ ಸುಪ್ರೀಂಕೋರ್ಟ್ ಗೆ ಪಿಐಎಲ್

ಸುಪ್ರೀಂಕೋರ್ಟ್ | PC : PTI
ಹೊಸದಿಲ್ಲಿ : ನೂತನವಾಗಿ ಜಾರಿಗೆ ಬರಲಿರುವ ಕ್ರಿಮಿನಲ್ ಕಾನೂನು ಮಸೂದೆಗಳಾದ ಭಾರತೀಯ ನ್ಯಾಯಸಂಹಿತೆ 2023, ಭಾರತೀಯ ಸಾಕ್ಷ್ಯ ಅಭಿಯಾನ 2023 ಹಾಗೂ ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತಾ, 2023 ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ಬುಧವಾರ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಕೆಯಾಗಿದೆ.
ಈ ನೂತನ ಕಾನೂನುಗಳ ಮೌಲ್ಯಮಾಪನ ನಡೆಸಲು ತಜ್ಞರ ಸಮಿತಿಯೊಂದನ್ನು ಕೂಡಲೇ ರಚಿಸುವಂತೆ ನಿರ್ಧಿಷ್ಟವಾದ ನಿರ್ದೇಶನಗಳನ್ನು ಜಾರಿಗೊಳಿಸುವಂತೆ ಮತ್ತು ನೂತನ ಕಾಯ್ದೆಗಳ ಕಾರ್ಯಸಾಧ್ಯತೆಗಳನ್ನು ಗುರುತಿಸುವಂತೆ ಅರ್ಜಿದಾರರು ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿದ್ದಾರೆ.
ನೂತನವಾಗಿ ಜಾರಿಗೆ ಬರಲಿರುವ ಭಾರತೀಯ ನ್ಯಾಯ ಸಂಹಿತಾ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ 2023 ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ 2023 ಕಾನೂನುಗಳು, ಈಗ ದೇಶದಲ್ಲಿ ಅಸ್ತಿತ್ವದಲ್ಲಿರುವ ಭಾರತೀಯ ಅಪರಾಧಿ ದಂಡ ಸಂಹಿತೆ 1860 ಹಾಗೂ 1972ರ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳನ್ನು ತೆರವುಗೊಳಿಸಲಿವೆ. ಜಾರಿಗೆ ಬರಲಿರುವ ಮೂರು ನೂತನ ಕ್ರಿಮಿನಲ್ ಕಾನೂನುಗಳಿಗೆ ಕಾರ್ಯನಿರ್ವಹಣೆ ಹಾಗೂ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡುವಂತೆ ಅರ್ಜಿದಾರರಾದ ಅಂಜಲಿ ಪಟೇಲ್ ಹಾಗೂ ಛಾಯಾ ಅವರು ನ್ಯಾಯವಾದಿಗಳಾದ ಸಂಜೀವ್ ಮಲ್ಹೋತ್ರಾ ಹಾಗೂ ಕುನ್ವರ್ ಸಿದ್ದಾರ್ಥ ಮೂಲಕ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಿದ್ದರು.







