‘ಮೊದಲ ಮನೆ… ವಿಶೇಷ ಸ್ಥಳ’: ಹಳೆಯ ಸಂಸತ್ ಭವನದ ಬಗ್ಗೆ ನೆನಪಿನ ಬುತ್ತಿ ಬಿಚ್ಚಿಟ್ಟ 10 ಮಹಿಳಾ ಸಂಸದರು
ಪ್ರಿಯಾಂಕಾ ಚತುರ್ವೇದಿ/ ಮಹುವಾ ಮೊಯಿತ್ರಾ / ಸ್ಮೃತಿ ಇರಾನಿ (Photo credit: PTI)
ಹೊಸದಿಲ್ಲಿ: ಸ್ವಾತಂತ್ರ್ಯಬಂದಾಗಿನಿಂದ ಇದೇ ಪ್ರಥಮ ಬಾರಿಗೆ ಭಾರತದ ಸಂಸತ್ ಕಲಾಪಗಳು ನೂತನ ಸಂಸತ್ ಭವನ ಸಂಕೀರ್ಣಕ್ಕೆ ವಿಶೇಷ ಸಂಸತ್ ಅಧಿವೇಶನದ ಸಂದರ್ಭದಲ್ಲಿ ಸ್ಥಳಾಂತರಗೊಳ್ಳಲಿವೆ. ಹಳೆಯ ಸಂಸತ್ ಭವನಕ್ಕೆ ಗೌರವ ಸಲ್ಲಿಸುವ ಸೂಚಕವಾಗಿ ಎಲ್ಲ ಪಕ್ಷಗಳ 10 ಮಂದಿ ಮಹಿಳಾ ಸಂಸದರು ಹಳೆಯ ಸಂಸತ್ ಭವನದ ಕುರಿತು ತಮ್ಮ ನೆನಪುಗಳನ್ನು ಬರಹ ರೂಪಕ್ಕಿಳಿಸಿದ್ದಾರೆ. ಆ ಮೂಲಕ ಭಾರತದ ಪ್ರಜಾಪ್ರಭುತ್ವ ಪಯಣದ ಕೇಂದ್ರಬಿಂದುವಾಗಿದ್ದ ಹಳೆಯ ಸಂಸತ್ ಭವನಕ್ಕೆ ವಿದಾಯ ಸಲ್ಲಿಸಿದ್ದಾರೆ ಎಂದು hindustantimes.com ವರದಿ ಮಾಡಿದೆ.
ಎಲ್ಲ 10 ಮಂದಿಗೆ ಸಂಸತ್ ಸದಸ್ಯರು ಹಳೆಯ ಸಂಸತ್ ಭವನದೊಂದಿಗಿನ ತಮ್ಮ ಸಂಸದೀಯ ಪಯಣದ ಕುರಿತು ಲಿಖಿತ ಟಿಪ್ಪಣಿಗಳ ಮೂಲಕ ಸಂದೇಶ ಹಂಚಿಕೊಂಡಿದ್ದಾರೆ.
ಹಳೆಯ ಸಂಸತ್ ಭವನಕ್ಕೆ ಕೇಂದ್ರ ಸಚಿವೆ ಹಾಗೂ ಬಿಜೆಪಿಯ ಸಂಸದೆ ಸ್ಮೃತಿ ಇರಾನಿ ತಮ್ಮ ಟಿಪ್ಪಣಿಯಲ್ಲಿ ಶುಭಾಶಯಗಳನ್ನು ಕೋರಿದ್ದರೆ, ಶಿವಸೇನೆ (ಉದ್ಧವ್ ಠಾಕ್ರೆ ಬಣ) ಸಂಸದೆ ಪ್ರಿಯಾಂಕಾ ಚತುರ್ವೇದಿ, ಈ ಐತಿಹಾಸಿಕ ಕಟ್ಟಡದಲ್ಲಿ ಜರುಗಿರುವ ತೀವ್ರ ಸ್ವರೂಪದ ಚರ್ಚೆಗಳು ಹಾಗೂ ಆ ಚರ್ಚೆಗಳ ನಡುವಿನ ಅಡ್ಡಿಗಳಿಗೆ ಸಾಕ್ಷಿಯಾಗಿರುವ ಬಗ್ಗೆ ಬಣ್ಣಿಸಿದ್ದಾರೆ.
“ಮಹಾನ್ ವ್ಯಕ್ತಿಗಳು ಹಾಗೂ ಇತಿಹಾಸದ ಸೃಷ್ಟಿಕಾರರು ಎಲ್ಲವೂ ಅದರ ಆವರಣದಲ್ಲಿ ನಡೆಯುವಂತೆ ಮಾಡಿದ್ದಾರೆ. ಹಳೆಯ ಸಂಸತ್ ಭವನವು ನಮ್ಮ 75 ವರ್ಷಗಳ ಪಯಣವನ್ನು ಆತ್ಮವಿಶ್ವಾಸದ ದೇಶವನ್ನಾಗಿ ರೂಪಿಸಿದೆ. ಈ ಪಯಣದ ಭಾಗವಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ ಹಾಗೂ ಈ ಸಂಸತ್ ಭವನದಲ್ಲಿನ ಸಾರವು ಹೊಸ ಸಂಸತ್ ಭವನದಲ್ಲೂ ಮುಂದುವರಿಯಲಿ ಎಂದು ಬಯಸುತ್ತೇನೆ” ಎಂದು ಅವರು ತಮ್ಮ ಟಿಪ್ಪಣಿಯಲ್ಲಿ ಬರೆದಿದ್ದಾರೆ.
ಅಕಾಲಿ ದಳದ ಸಂಸದೆ ಹರ್ ಸಿಮ್ರತ್ ಕೌರ್ ಬಾದಲ್ ಹಳೆಯ ಸಂಸತ್ ಭವನವನ್ನು “144 ಸ್ತಂಭಗಳನ್ನು ಹೊಂದಿರುವ ದೇವಾಲಯವಾಗಿದ್ದು, ಅದು ನನ್ನಲ್ಲಿ ವಿವಿಧ ಬಗೆಯ ನೆನಪುಗಳನ್ನು ಉಳಿಸಿದೆ” ಎಂದು ಬಣ್ಣಿಸಿದ್ದರೆ, ಕೇಂದ್ರ ಸಚಿವೆ ಹಾಗೂ ಅಪ್ನಾ ದಳ(ಎಸ್) ಸಂಸದೆ ಅನುಪ್ರಿಯಾ ಪಟೇಲ್, ನಾನು ಹಳೆಯ ಸಂಸತ್ ಭವನವನ್ನು ಪ್ರವೇಶಿಸುವಾಗಲೆಲ್ಲ ಐತಿಹಾಸಿಕ ಕಟ್ಟಡವನ್ನು ಪ್ರವೇಶಿಸುತ್ತಿದ್ದೇನೆ” ಎಂಬ ಭಾವನೆ ಉಂಟಾಗುತ್ತಿತ್ತು ಎಂದು ಸ್ಮರಿಸಿದ್ದಾರೆ.
ಪಕ್ಷೇತರ ಸಂಸದೆ ನವನೀತ್ ರಾಣಾ, ಹಳೆಯ ಸಂಸತ್ ಭವನದಿಂದ ಸಾಕಷ್ಟು ಸಂಗತಿಗಳನ್ನು ಕಲಿಯುವ ಅವಕಾಶ ದೊರೆಯಿತು ಎಂದು ಬರೆದುಕೊಂಡಿದ್ದಾರೆ.
ಇವರೊಂದಿಗೆ ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ, ಬಿಜೆಪಿ ಸಂಸದೆ ಪೂನಮ್ ಮಹಾಜನ್, ಕಾಂಗ್ರೆಸ್ ಸಂಸದೆ ರಮ್ಯಾ ಹರಿದಾಸ್, ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮಹುವಾ ಮೊಯಿತ್ರಾ, ರಾಜ್ಯಸಭಾ ಸಂಸದೆ ಪಿ.ಟಿ.ಉಷಾ ಕೂಡಾ ಹಳೆಯ ಸಂಸತ್ ಭವನದೊಂದಿಗಿನ ತಮ್ಮ ನೆನಪುಗಳನ್ನು ಹಂಚಿಕೊಂಡು ಅದಕ್ಕೆ ಗೌರವ ಸೂಚಿಸಿದ್ದಾರೆ.