ಕೇಜ್ರಿವಾಲ್ ಗೆ 14 ದಿನಗಳ ನ್ಯಾಯಾಂಗ ಬಂಧನ

ಅರವಿಂದ ಕೇಜ್ರಿವಾಲ್ | PC : PTI
ಹೊಸದಿಲ್ಲಿ : ದಿಲ್ಲಿ ಮದ್ಯನೀತಿ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ವಿಶೇಷ ಸಿಬಿಐ ನ್ಯಾಯಾಲಯವು ಶನಿವಾರ 14 ದಿನಗಳ ನ್ಯಾಯಾಂಗ ಕಸ್ಟಡಿ ವಿಧಿಸಿದೆ. ಪ್ರಕರಣದ ತನಿಖೆ ಹಾಗೂ ನ್ಯಾಯದ ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ ಕೇಜ್ರಿವಾಲ್ ಅವರನ್ನು ಕಸ್ಟಡಿಯಲ್ಲಿರಿಸುವ ಅಗತ್ಯವಿದೆ ಎಂದು ಸಿಬಿಐ ನ್ಯಾಯಾಲಯದಲ್ಲಿ ವಾದಿಸಿತ್ತು.
ಕೇಜ್ರಿವಾಲ್ ಅವರ ಮೂರು ದಿನಗಳ ಸಿಬಿಐ ಕಸ್ಟಡಿ ಶನಿವಾರ ಕೊನೆಗೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಾಲಯಕ್ಕೆ ಸಿಬಿಐ ಹಾಜರುಪಡಿಸಿದ್ದು, ದಿಲ್ಲಿ ಮುಖ್ಯಮಂತ್ರಿಯ ಕಸ್ಟಡಿ ಅವಧಿಯನ್ನು ವಿಸ್ತರಿಸುವಂತೆ ಕೋರಿತ್ತು. ಪ್ರಕರಣದ ಆಲಿಕೆ ನಡೆಸಿದ ವಿಶೇಷ ನ್ಯಾಯಾಧೀಶೆ ಸುನೇನಾ ಶರ್ಮಾ ಅವರು ತನ್ನ ಆದೇಶವನ್ನು ಕಾದಿರಿಸಿದರು.
ವಿಚಾರಣೆಯ ವೇಳೆ ಕೇಜ್ರಿವಾಲ್ ಸಹಕರಿಸಲಿಲ್ಲ ಹಾಗೂ ಅವರು ಹಾರಿಕೆಯ ಉತ್ತರಗಳನ್ನು ನೀಡಿದರು ಎಂದು ಸಿಬಿಐ ನ್ಯಾಯಾಲಯದಲ್ಲಿ ಆಪಾದಿಸಿತು.
ದಿಲ್ಲಿ ಸರಕಾರದ 2021-22ನೇ ಸಾಲಿನ ನೂತನ ಅಬಕಾರಿ ನೀತಿಯು ಯಾವುದೇ ಅಧ್ಯಯನವನ್ನು ನಡೆಸದೇ ಹಾಗೂ ಯಾವುದೇ ಸಮರ್ಥನೆಯನ್ನು ನೀಡದೆ, ಸಗಟು ಮದ್ಯ ವ್ಯಾಪಾರಿಗಳ ಲಾಭದ ಮಿತಿಯನ್ನು ಶೇ.5ರಿಂದ ಶೇ.12ಕ್ಕೇರಿಸಿತ್ತು’’ ಎಂದು ಸಿಬಿಐ ಆಪಾದಿಸಿದೆ.
‘‘ಕೋವಿಡ್ ಸಾಂಕ್ರಾಮಿಕದ ಎರಡನೆ ಅಲೆಯ ಉತ್ತುಂಗ ಸ್ಥಿತಿಯ ಸಂದರ್ಭದಲ್ಲಿಯೂ ಪರಿಷ್ಕೃತ ಅಬಕಾರಿ ನೀತಿಗೆ ಒಂದೇ ದಿನದೊಳಗೆ ತರಾತುರಿಯಲ್ಲಿ ಸಂಪುಟದ ಅನುಮೋದನೆಯನ್ನು ಪಡೆದುಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ದಕ್ಷಿಣದ ಗುಂಪಿಗೆ ಸೇರಿದ ಆರೋಪಿಗಳು, ಕೇಜ್ರಿವಾಲ್ ಅವರ ನಿಕಟವರ್ತಿ ವಿಜಯನಾಯರ್ ಅವರೊಂದಿಗೆ ಮಾತುಕತೆಗಳನ್ನು ನಡೆಸಿದ್ದರು’’ ಎಂದು ಸಿಬಿಐ ಹೇಳಿದೆ.
ದಿಲ್ಲಿಯ ಮದ್ಯ ಉದ್ಯಮದ ಹಿತಧಾರಕರೊಂದಿಗೆ ತನ್ನ ಸಹಚರ ವಿಜಯ ನಾಯರ್ ಸಭೆಗಳನ್ನು ನಡೆಸಿದ್ದಾರೆಂಬ ಆರೋಪಗಳಿಗೆ ಸಂಬಂಧಿಸಿ ಕೇಳಲಾದ ಪ್ರಶ್ನೆಗಳಿಗೆ ಕೇಜ್ರಿವಾಲ್ ನುಣುಚಿಕೊಳ್ಳುವ ಉತ್ತರಗಳನ್ನು ನೀಡಿದರು. ಅಲ್ಲದೆ ಪ್ರಕರಣದ ಇತರ ಆರೋಪಿಗಳಾದ ಮಾಗುಂಟ ಶ್ರೀನಿವಾಸಲು ರೆಡ್ಡಿ, ಅರ್ಜುನ್ ಪಾಂಡೆ ಹಾಗೂ ಮೂಧಾ ಗೌತಮ್ ಅವರ ಜೊತೆ ನಡೆಸಿದ ಸಭೆಗಳ ಬಗ್ಗೆ ಸೂಕ್ತವಾದ ವಿವರಣೆಯನ್ನು ನೀಡಲು ಕೇಜ್ರಿವಾಲ್ ಅಸಮರ್ಥರಾಗಿದ್ದರೆಂದು ಸಿಬಿಐ ಆಪಾದಿಸಿದೆ.
‘‘ಪ್ರಮುಖ ರಾಜಕಾರಣಿ ಹಾಗೂ ದಿಲ್ಲಿಯ ಮುಖ್ಯಮಂತ್ರಿಯಾದ ಕೇಜ್ರಿವಾಲ್ ಅವರು ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಪ್ರಕರಣದ ಸಾಕ್ಷಿಗಳ ಮೇಲೆ ಅವರು ಪ್ರಭಾವ ಬೀರುವ ಸಾಧ್ಯತೆ ಇದೆ. ಅಲ್ಲದೆ ಕಸ್ಟಡಿ ವಿಚಾರಣೆಯ ಸಂದರ್ಭದಲ್ಲಿ ಈಗಾಗಲೇ ಅವರ ಮುಂದೆ ಈಗಾಗಲೇ ಪುರಾವೆಗಳನ್ನು ಅನಾವರಣಗೊಳಿಸಿರುವುದರಿಂದ ಅವುಗಳನ್ನು ತಿರುಚುವ ಸಾಧ್ಯತೆಯಿದೆ. ಜೊತೆಗೆ ಇನ್ನೂ ವಿಚಾರಣೆಗೆ ಒಳಪಡಬೇಕಾಗಿರುವ ಸಂಭಾವ್ಯ ಸಾಕ್ಷಿದಾರರರ ಮೇಲೂ ಅವರು ಪ್ರಭಾವ ಬೀರುವ ಮತ್ತು ಈಗ ನಡೆಯುತ್ತಿರುವ ತನಿಖೆಗೆ ಅಡ್ಡಿಪಡಿಸುವ ಸಾಧ್ಯತೆಯಿದೆ ಎಂದವರು ಹೇಳಿದರು.
ದಿಲ್ಲಿ ಸರಕಾರದ 2021-22ನೇ ಸಾಲಿನ ಮದ್ಯ ನೀತಿಯಲ್ಲಿ ಅಕ್ರಮಗಳು ನಡೆದಿದೆಯೆನ್ನಲಾದ ಆರೋಪಕ್ಕೆ ಸಂಬಂಧಿಸಿ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯವು ಮಾರ್ಚ್ 21ರಂದು ಬಂಧಿಸಿತ್ತು.







