ಛತ್ತೀಸ್ ಗಢ ಸಚಿವರ ಧೂಮಪಾನ ಕೋಚಿಂಗ್; ವ್ಯಾಪಕ ಟೀಕೆ

Photo: TOI
ರಾಯಪುರ: ಛತ್ತೀಸ್ಗಢ ಸಚಿವ ಕವಾಸಿ ಲಖ್ಮಾ ಅವರು ಧೂಮಪಾನವನ್ನು ಉತ್ತೇಜಿಸುತ್ತಿರುವ ವೀಡಿಯೋ ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದ್ದು, ವಿರೋಧ ಪಕ್ಷವಾದ ಬಿಜೆಪಿ, ಸಚಿವರ ಕ್ರಮವನ್ನು ಟೀಕಿಸಿದೆ.
ಈ ವೀಡಿಯೋದಲ್ಲಿ ಸಚಿವರು, ಧೂಮಪಾನ ಮಾಡುವಾಗ ಹೊಗೆಯನ್ನು ಬಾಯಿಯ ಮೂಲಕ ಹೊಗೆಯನ್ನು ಒಳಕ್ಕೆಳೆದುಕೊಂಡು ಮೂಗಿನ ಮೂಲಕ ಹೊರಬಿಡಬೇಕು ಎಂದು ಪ್ರಾತ್ಯಕ್ಷಿಕೆ ನೀಡುತ್ತಿರುವುದು ಕಾಣಿಸುತ್ತಿದೆ.
ಬೀಡಿ ಸೇದುತ್ತಿರುವ ಸಂಪುಟ ದರ್ಜೆ ಸಚಿವರು ಗ್ರಾಮಸ್ಥರಿಗೆ ಈ ಬಗ್ಗೆ ಸೂಚನೆ ಕೊಡುತ್ತಿರುವ ವೀಡಿಯೋ ವಿವಾದ ಹುಟ್ಟುಹಾಕಿದ್ದು, ವಿವಿಧೆಡೆಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ವೀಡಿಯೋದಲ್ಲಿ ಸಚಿವರು ಸಾರ್ವಜನಿಕ ಸ್ಥಳದಲ್ಲಿ ಗ್ರಾಮಸ್ಥರ ಜತೆ ಹರಟೆ ಹೊಡೆಯುತ್ತಾ ಆರಾಮವಾಗಿ ಬೀಡಿ ಸೇದುತ್ತಿರುವುದು ಕಾಣಿಸುತ್ತಿದೆ. ಬಳಿಕ ಧೂಮಪಾನ ಮಾಡುವಾಗ ಹೊಗೆಯನ್ನು ಬಾಯಿಯ ಮೂಲಕ ಹೊಗೆಯನ್ನು ಒಳಕ್ಕೆಳೆದುಕೊಂಡು ಮೂಗಿನ ಮೂಲಕ ಹೇಗೆ ಹೊರಬಿಡಬೇಕು ಎಂದು ಪ್ರಾತ್ಯಕ್ಷಿಕೆ ನೀಡುತ್ತಿರುವುದು ಕಾಣಿಸುತ್ತಿದೆ.
ಸಚಿವರ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ಇದು ಗಾಂಧಿ ತತ್ವಗಳಿಗೆ ಮಾಡಿದ ಅವಮಾನ ಎಂದಿದೆ. ಧೂಮಪಾನವನ್ನು ಬಲವಾಗಿ ವಿರೋಧಿಸುತ್ತಾ ಬಂದ ಮಹಾನ್ ನಾಯಕನ ತತ್ವಗಳನ್ನು ಗಾಳಿಗೆ ತೂರುವ ಕ್ರಮ ಎಂದು ಟೀಕಿಸಿದೆ. ಮಾದಕವಸ್ತುಗಳ ದುರ್ಬಳಕಯನ್ನು ಸರ್ಕಾರ ಉತ್ತೇಜಿಸುತ್ತಿದೆ ಎಂದು ಆರೋಪಿಸಿದೆ.





