ಹೈದರಾಬಾದ್: ಭೀಕರ ಬೆಂಕಿ ಅವಘಡ, 9 ಮಂದಿ ಸಜೀವ ದಹನ

Photo : ANI video grab
ಹೈದರಾಬಾದ್: ಇಲ್ಲಿಯ ನಾಂಪಲ್ಲಿ ಪ್ರದೇಶದ ಬಜಾರ್ ಘಾಟ್ನಲ್ಲಿಯ ವಸತಿ ಕಟ್ಟಡದ ನೆಲ ಅಂತಸ್ತಿನಲ್ಲಿಯ ರಾಸಾಯನಿಕಗಳ ಅಂಗಡಿಯಲ್ಲಿ ಸೋಮವಾರ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಇಡೀ ಕಟ್ಟಡವನ್ನು ಆವರಿಸಿಕೊಂಡು 9 ಜನರು ಸಜೀವ ದಹನಗೊಂಡಿದ್ದಾರೆ.
ಜನನಿಬಿಡ ಪ್ರದೇಶವಾಗಿರುವ ಬಜಾರ್ ಘಾಟ್ ನಲ್ಲಿಯ ರಾಸಾಯನಿಕ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಶೀಘ್ರವೇ ಇಡೀ ಅಂಗಡಿಯನ್ನು ಆವರಿಸಿತ್ತು ಮತ್ತು ಬೆಂಕಿಯ ಜ್ವಾಲೆಗಳು ಮೇಲಿದ್ದ ಅಪಾರ್ಟ್ಮೆಂಟ್ ಗೂ ಹರಡಿದ್ದವು.
ಮಾಹಿತಿ ತಿಳಿದ ಕೆಲವೇ ಕ್ಷಣಗಳಲ್ಲಿ ಅಗ್ನಿಶಾಮಕ ದಳವು ಸ್ಥಳಕ್ಕೆ ಧಾವಿಸಿತ್ತು. ಬೆಂಕಿಯನ್ನು ನಿಯಂತ್ರಿಸಲು ಮೂರು ಅಗ್ನಿಶಾಮಕ ಯಂತ್ರಗಳನ್ನು ಬಳಸಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಒಂಭತ್ತು ಜನರು ಸಜೀವ ದಹನಗೊಂಡಿದ್ದರು. ಅಪಾರ್ಟ್ಮೆಂಟ್ ನಲ್ಲಿದ್ದ ೧೬ ಜನರನ್ನು ರಕ್ಷಿಸಲಾಗಿದೆ.
ಅಗ್ನಿಶಾಮಕ ದಳ, ಪೋಲಿಸ್ ಮತ್ತು ಡಿಆರ್ಎಫ್ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದರು. ಅಪಾರ್ಟ್ಮೆಂಟ್ಗಳಲ್ಲಿ ಸಿಕ್ಕಿಕೊಂಡಿದ್ದವರನ್ನು ಕಿಟಕಿಗಳಿಂದ ಏಣಿಗಳ ಮೂಲಕ ಕೆಳಕ್ಕೆ ಇಳಿಸಲಾಗಿತ್ತು. ಇಡೀ ಪ್ರದೇಶವು ದಟ್ಟವಾದ ಹೊಗೆಯಿಂದ ತುಂಬಿದ್ದು, ಎರಡು ಬೈಕ್ ಗಳು ಬೆಂಕಿಗಾಹುತಿಯಾಗಿವೆ.







