ಕುರ್ಆನ್ ವಚನ ಕೆತ್ತಿದ ಪೆಂಡೆಂಟ್ ಧರಿಸಿ ವಿವಾದಕ್ಕೆ ಸಿಲುಕಿದ ಬಾಲಿವುಡ್ ನಟಿ ಕರೀನಾ ಕಪೂರ್
ಚಿತ್ರಗಳನ್ನು ಅಳಿಸಿ, ಬೇಷರತ್ ಕ್ಷಮೆಯಾಚಿಸುವಂತೆ ಆಗ್ರಹ

Photo: screengrab/ instagram.com/p/Dfg0o8mkdJU
ಮುಂಬೈ: ದೀಪಾವಳಿ ಸಂದರ್ಭದಲ್ಲಿ 200 ವರ್ಷ ಹಳೆಯ ಭೋಪಾಲ್ ರಾಜಮನೆತನದ ಆಭರಣ ಧರಿಸಿದ್ದ ನಟಿ ಕರೀನಾ ಕಪೂರ್ ಖಾನ್ ವಿವಾದಕ್ಕೆ ಸಿಲುಕಿದ್ದಾರೆ. ಆ ಆಭರಣದಲ್ಲಿರುವ ಪೆಂಡೆಂಟ್ ಮೇಲೆ ಕುರ್ಆನಿನ ಪವಿತ್ರ ವಚನ ಕೆತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಮಧ್ಯಪ್ರದೇಶ ಕಾಂಗ್ರೆಸ್ ವಕ್ತಾರ ಅಬ್ಬಾಸ್ ಹಫೀಝ್, ಕರೀನಾ ಕಪೂರ್ ಅವರಿಗೆ ನೋಟಿಸ್ ಕಳುಹಿಸಿದ್ದಾರೆ. ಅವರ ಸ್ಟೈಲಿಸ್ಟ್ ರಿಯಾ ಕಪೂರ್ ಅವರಿಗೂ ನೋಟಿಸ್ ನೀಡಿದ್ದಾರೆ ಎಂದು India Today ವರದಿ ಮಾಡಿದೆ.
ಪವಿತ್ರ ಕುರ್ಆನ್ ನ ವಚನವನ್ನು ಫ್ಯಾಷನ್ ಪರಿಕರವಾಗಿ ಬಳಸಿರುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ ಎಂಬುದು ಹಫೀಝ್ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ಸಂಬಂಧಿತ ಫೋಟೊಗಳನ್ನು ತೆಗೆದುಹಾಕಿ, ಇಬ್ಬರೂ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ದೀಪಾವಳಿ ಉಡುಪಿನಲ್ಲಿ ತೆಗೆಸಿಕೊಂಡ ಫೋಟೊಗಳನ್ನು ಕರೀನಾ ಕಪೂರ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅವುಗಳಲ್ಲಿ ಅವರು ಧರಿಸಿದ್ದ ಪೆಂಡೆಂಟ್ ನ ಮೇಲೆ ಕುರ್ಆನ್ ನ 'ಆಯತುಲ್-ಕುರ್ಸಿ' ವಚನ ಕೆತ್ತಿರುವುದನ್ನು ಜನರು ಗುರುತಿಸಿದ್ದರು. ಇದರಿಂದ ವಿವಾದ ಆರಂಭವಾಗಿತ್ತು.
ಇಂತಹ ವಚನವನ್ನು ಫ್ಯಾಷನ್ ನ ಭಾಗವಾಗಿ ಬಳಸುವುದು ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಬಹುದು ಎಂದು ಹಫೀಝ್ ಹೇಳಿದ್ದಾರೆ. ತಾವು ಮುಸ್ಲಿಂ ಎಂಬ ವೈಯಕ್ತಿಕ ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದು, ಕಾಂಗ್ರೆಸ್ ಪಕ್ಷಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಫೋಟೊಗಳನ್ನು ತೆಗೆದುಹಾಕಿ ಬೇಷರತ್ ಕ್ಷಮೆಯಾಚಿಸದಿದ್ದರೆ ಪೊಲೀಸ್ ಅಥವಾ ನ್ಯಾಯಾಲಯದ ಮೊರೆ ಹೋಗುವುದಾಗಿಯೂ ಅವರು ಎಚ್ಚರಿಸಿದ್ದಾರೆ.
ರಾಜಮನೆತನದ ಪರಂಪರೆಯ ಆಭರಣ
ದೀಪಾವಳಿಗಾಗಿ ಕರೀನಾ ಅವರು ವಿನ್ಯಾಸಕ ಪುನೀತ್ ಬಲಾನಾ ರೂಪಿಸಿದ್ದ ಶುದ್ಧ ಬೆಳ್ಳಿಯ 'ಕಫ್ತಾನ್' ಉಡುಪು ಮತ್ತು ಅದಕ್ಕೆ ಹೊಂದಿಕೆಯಾಗುವ ಪೇಟ ಧರಿಸಿದ್ದರು. ಇದರೊಂದಿಗೆ ಭೋಪಾಲ್ ನ ನವಾಬರಿಗೆ ಸೇರಿದ್ದ 200 ವರ್ಷ ಹಳೆಯ 'ಕಲ್ಗಿ' (ತಲೆಯ ಆಭರಣ) ಹಾಗೂ ಭೋಪಾಲ್ನ ಬೇಗಂಗೆ ಸೇರಿದ 30 ಕ್ಯಾರೆಟ್ ಪೆಂಡೆಂಟ್ ಹಾರವನ್ನೂ ಧರಿಸಿದ್ದರು.
ಈ ಆಭರಣಗಳು ಭೋಪಾಲ್ ರಾಜಮನೆತನದ ಪರಂಪರಾಗತ ಆಸ್ತಿಗಳಾಗಿದ್ದು, ಕರೀನಾ ಅವರ ಪತಿ ಸೈಫ್ ಅಲಿ ಖಾನ್ ಅವರ ಕುಟುಂಬದ ಮೂಲಕ ಬಂದಿವೆ. ಸೈಫ್ ಅವರ ಅಜ್ಜಿ ಸಾಜಿದಾ ಸುಲ್ತಾನ್ ಅವರು ಭೋಪಾಲ್ ನ ಕೊನೆಯ ಆಡಳಿತಗಾರ ನವಾಬರ ಪುತ್ರಿಯಾಗಿದ್ದರು.






