ಬಿಹಾರ ಮತಪಟ್ಟಿ ಪರಿಷ್ಕರಣೆಯಲ್ಲಿ ವ್ಯಾಪಕ ಅವ್ಯವಹಾರ: ಸುಪ್ರೀಂಕೋರ್ಟ್ ಗೆ ಹೇಳಿಕೆ

ಹೊಸದಿಲ್ಲಿ: ಬಿಹಾರದಲ್ಲಿ ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ವ್ಯಾಪಕ ಅಕ್ರಮಗಳ ನಡೆದಿವೆ ಎಂದು ಸುಪ್ರೀಂಕೋರ್ಟ್ ಗೆ ಶನಿವಾರ ಮಾಹಿತಿ ನೀಡಲಾಗಿದೆ. ಪರಿಷ್ಕರಣೆಯನ್ನು ವಿರೋಧಿಸಿ ಸುಪ್ರೀಂಕೋರ್ಟ್ ನಲ್ಲಿ ವಾದ ಮಂಡಿಸುವ ವೇಳೆ, ಬೂತ್ ಮಟ್ಟದ ಅಧಿಕಾರಿಗಳೇ ಗಣತಿ ಅರ್ಜಿಗೆ ಸಹಿ ಮಾಡುತ್ತಿರುವುದು ಕಂಡುಬಂದಿದೆ. ಅಂತೆಯೇ ಮೃತ ವ್ಯಕ್ತಿಗಳು ಕೂಡಾ ಅರ್ಜಿ ಭರ್ತಿ ಮಾಡಿದ್ದಾರೆ ಎಂದು ತೋರಿಸಲಾಗಿದೆ. ಅರ್ಜಿ ನಮೂನೆಗಳನ್ನು ಭರ್ತಿ ಮಾಡದ ಜನರಿಗೆ ಕೂಡಾ ನಿಮ್ಮ ಅರ್ಜಿ ತುಂಬಲಾಗಿದೆ ಎಂಬ ಮಾಹಿತಿ ಬಂದಿದೆ ಎಂದು ವಿವರಿಸಲಾಯಿತು.
ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ಬಿಹಾರದ ಪ್ರಮುಖ ವಿರೋಧ ಪಕ್ಷವಾಗಿರುವ ಆರ್ ಜೆಡಿ ಪರ ವಕೀಲರು, ಪರಿಷ್ಕರಣೆಯಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ ಎಂಬ ಚುನಾವಣಾ ಆಯೋಗದ ವಾದವನ್ನು ಅಲ್ಲಗಳೆದರು. ಚುನಾವಣಾ ಆಯೋಗ ನೀಡಿರುವ ಅಂಕಿ ಅಂಶದಲ್ಲಿ ಯಾವುದೇ ಹುರುಳಿಲ್ಲ. ಏಕೆಂದರೆ ಬಹುತೇಕ ಅರ್ಜಿಗಳನ್ನು ಯಾವುದೇ ದಾಖಲೆಗಳು ಇಲ್ಲದೇ ಸಂಗ್ರಹಿಸಲಾಗಿದೆ ಮತ್ತು ದೊಡ್ಡ ಸಂಖ್ಯೆಯ ಮತದಾರರಿಗೆ ನ್ಯಾಯಬದ್ಧ ಹಕ್ಕು ನಿರಾಕರಿಸಲಾಗಿದೆ ಎಂದು ವಾದಿಸಿದರು.
ಚುನಾವಣಾ ಆಯೋಗ ನೀಡಿದ ಅವಾಸ್ತವಿಕ ಗುರಿ ಸಾಧಿಸುವ ಸಲುವಾಗಿ ಮತದಾರರ ಗಮನಕ್ಕೆ ಬಾರದೇ ಅಥವಾ ಅವರ ಒಪ್ಪಿಗೆ ಇಲ್ಲದೇ ದೊಡ್ಡ ಪ್ರಮಾಣದಲ್ಲಿ ಅರ್ಜಿಗಳನ್ನು ಬೂತ್ ಮಟ್ಟದ ಅಧಿಕಾರಿಗಳು ಅಪ್ಲೋಡ್ ಮಾಡಿದ್ದಾರೆ. ಹಲವು ಮಂದಿ ಬೂತ್ ಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡದಿದ್ದರೂ ಅಥವಾ ಯಾವುದೇ ದಾಖಲೆಗಳಿಗೆ ಸಹಿ ಮಾಡಿ ಕೊಡದೇ ಇದ್ದರೂ, "ನಿಮ್ಮ ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಲಾಗಿದೆ ಎಂಬ ಸಂದೇಶ ಮತದಾರರಿಗೆ ಬಂದಿದೆ" ಎಂದು ವಿವರಿಸಲಾಗಿದೆ. ಮೃತ ವ್ಯಕ್ತಿಗಳ ಅರ್ಜಿಗಳನ್ನು ಕೂಡಾ ಸಲ್ಲಿಸಲಾಗಿದೆ ಎಂದು ಎಡಿಆರ್ ವಕೀಲೆ ನೇಹಾ ರಾಠಿ ಪ್ರತಿಕ್ರಿಯೆ ಸಲ್ಲಿಸಿದರು.
ಇದು ದೋಷಪೂರಿತವಾಗಿ ಎಸ್ಐಆರ್ ನಡೆಸಲಾಗತ್ತಿದೆ ಎನ್ನುವುದನ್ನು ಮತ್ತು ಮತದಾರರ ಪಟ್ಟಿಯ ಸಮಗ್ರತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳಲಾಗಿದೆ ಎನ್ನುವುದನ್ನು ಸೂಚಿಸುತ್ತದೆ ಎಂದರು. ಇದು ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಕಡೆಗಣಿಸಿ ಲಕ್ಷಾಂತರ ಮತದಾರರ ಮೇಲೆ ಪರಿಣಾಮ ಬೀರುತ್ತದೆ ಎಂದು ವಾದ ಮಂಡಿಸಿದರು.







