ಭದ್ರತಾ ಪಡೆಗಳ ಜೊತೆಗಿನ ಗುಂಡಿನ ಚಕಮಕಿಯಲ್ಲಿ 10 ಉಗ್ರರು ಹತ

PC: PTI
ಚಂಡೇಲ್, ಮಣಿಪುರ: ಅಸ್ಸಾಂ ರೈಫಲ್ಸ್ ಜತೆಗಿನ ಗುಂಡಿನ ಕಾಳಗದಲ್ಲಿ ಕನಿಷ್ಠ 10 ಮಂದಿ ಉಗ್ರರು ಹತರಾಗಿದ್ದಾರೆ ಎಂದು ಭಾರತೀಯ ಸೇನೆ ಪ್ರಕಟಿಸಿದೆ. ಮಣಿಪುರದ ಚಂಡೇಲ್ ಜಿಲ್ಲೆಯಲ್ಲಿ ಬುಧವಾರ ಈ ಚಕಮಕಿ ನಡೆದಿದ್ದು, ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಉಗ್ರರರಿಂದ ವಶಪಡಿಸಿಕೊಳ್ಳಲಾಗಿದೆ.
ಭಾರತ- ಮ್ಯಾನ್ಮಾರ್ ಗಡಿಗೆ ಹೊಂದಿಕೊಂಡಿರುವ ಚಂಡೇಲ್ ಜಿಲ್ಲೆಯ ಹೊಸ ಸಮ್ತಾಲ್ ಗ್ರಾಮದಲ್ಲಿ ಸಶಸ್ತ್ರ ಉಗ್ರರ ಚಲನ ವಲನಗಳಿವೆ ಎಂಬ ನಿಖರ ಗುಪ್ತಚರ ವರದಿಗಳನ್ನು ಆಧರಿಸಿ ಅಸ್ಸಾಂ ರೈಫಲ್ಸ್ ಘಟಕ ಈ ದಾಳಿ ನಡೆಸಿದೆ ಎಂದು ಸೇನೆಯ ಪೂರ್ವ ಕಮಾಂಡ್ ಎಕ್ಸ್ ಪೋಸ್ಟ್ ನಲ್ಲಿ ವಿವರಿಸಿದೆ.
ಉಗ್ರಗಾಮಿಗಳು ಸೇನೆಯತ್ತ ಗುಂಡು ಹಾರಿಸಿದಾಗ, ಅಸ್ಸಾಂ ರೈಫಲ್ಸ್ ನಡೆಸಿದ ಪ್ರತಿದಾಳಿಯಲ್ಲಿ ಕನಿಷ್ಠ 10 ಮಂದಿ ಹತ್ಯೆಯಾಗಿದ್ದಾರೆ. ಕಾರ್ಯಾಚರಣೆ ಮುಂದುವರಿದಿದೆ ಎಂದು ಸೇನೆ ಸ್ಪಷ್ಟಪಡಿಸಿದೆ.
ಉಗ್ರರನ್ನು ಗುರಿಮಾಡಿ ರಾಜ್ಯಾದ್ಯಂತ ಕಾರ್ಯಾಚರಣೆ ನಡೆಯುತ್ತಿರುವ ಮಧ್ಯೆಯೇ ಈ ಘಟನೆ ವರದಿಯಾಗಿದೆ. ಕಳೆದ ವಾರ ಕನಿಷ್ಠ 13 ಮಂದಿ ಉಗ್ರರನ್ನು ಭದ್ರತಾ ಪಡೆ ಮತ್ತು ಮಣಿಪುರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿತ್ತು.