Bihar | ಗಂಗಾ ನದಿಯಲ್ಲಿ ದೋಣಿ ದುರಂತ: ಮಹಿಳೆಯರು, ಮಕ್ಕಳು ಸೇರಿ ಕನಿಷ್ಠ 11 ಮಂದಿ ಮೃತ್ಯು
ಔತಣಕೂಟಕ್ಕೆ ತೆರಳುತ್ತಿದ್ದಾಗ ಅವಘಡ; ಐವರ ರಕ್ಷಣೆ

Photo Credit : indiatoday.in
ಹಾಜಿಪುರ: ಬಿಹಾರದ ವೈಶಾಲಿ ಜಿಲ್ಲೆಯ ಹಾಜಿಪುರ ಸಮೀಪ ಗಂಗಾ ನದಿಯಲ್ಲಿ ದೋಣಿಯೊಂದು ಮಗುಚಿ ಬಿದ್ದ ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 11 ಮಂದಿ ಮೃತಪಟ್ಟಿದ್ದಾರೆ. ಐವರನ್ನು ರಕ್ಷಿಸಲಾಗಿದೆ ಎಂದು ವೈಶಾಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.
ರಘೋಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಮ್ಪುರ್ ಶ್ಯಾಮ್ಚಂದ್ ಗ್ರಾಮದ ಬಳಿ ಈ ದುರಂತ ಸಂಭವಿಸಿದೆ. ಸುಮಾರು 15ರಿಂದ 20 ಮಂದಿಯನ್ನು ಹೊತ್ತೊಯ್ಯುತ್ತಿದ್ದ ದೋಣಿಯಲ್ಲಿ ಪ್ರಯಾಣಿಕರು ಔತಣಕೂಟವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದರು. ಈ ವೇಳೆ ದೋಣಿ ನದಿಯಲ್ಲಿ ಮಗುಚಿ ಬಿದ್ದಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಆರಂಭದಲ್ಲಿ ಐದರಿಂದ ಎಂಟು ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿತ್ತು. ಬಳಿಕ ಸಾವಿನ ಸಂಖ್ಯೆ 11ಕ್ಕೆ ಏರಿರುವುದು ದೃಢಪಟ್ಟಿದೆ. ಮೃತಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ವರದಿಯಾಗಿದೆ.
ಘಟನೆಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಮೃತಪಟ್ಟವರ ಗುರುತು ಹಾಗೂ ದೋಣಿಯಲ್ಲಿದ್ದವರ ನಿಖರ ಸಂಖ್ಯೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ತೇಜಸ್ವಿ ಯಾದವ್ ಸಂತಾಪ
ದೋಣಿ ದುರಂತದ ಬಗ್ಗೆ ಆರ್ಜೆಡಿ (RJD) ನಾಯಕ ತೇಜಸ್ವಿ ಯಾದವ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
‘ರಘೋಪುರ್ ದಿಯಾರಾ ಪ್ರದೇಶದಲ್ಲಿ ದೋಣಿ ಮಗುಚಿ ಬಿದ್ದಿರುವ ಆತಂಕಕಾರಿ ಸುದ್ದಿ ಬಂದಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ಮಕ್ಕಳು. ದೇವರು ಎಲ್ಲರನ್ನೂ ಸುರಕ್ಷಿತವಾಗಿರಿಸಲಿ. ಸ್ಥಳೀಯ ನಿವಾಸಿಗಳು, ಆಡಳಿತ ಮಂಡಳಿ ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ಬಳಿಕ ಪರಿಹಾರ, ರಕ್ಷಣಾ ಕಾರ್ಯ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ತ್ವರಿತಗೊಳಿಸುವಂತೆ ಸೂಚಿಸಲಾಗಿದೆ’ ಎಂದು ಅವರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.






