ಹಿಮಾಚಲ ಪ್ರದೇಶ | ಪ್ರವಾಹದಲ್ಲಿ ಕೊಚ್ಚಿ ಹೋದ ಕುಟುಂಬ: ಪವಾಡಸದೃಶವಾಗಿ ಬದುಕುಳಿದ 11 ತಿಂಗಳ ಮಗು!

Screengrab: X/ @divya_gandotra
ಶಿಮ್ಲಾ: ಕಳೆದ ಕೆಲವು ದಿನಗಳಿಂದ ಹಿಮಾಚಲ ಪ್ರದೇಶದಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದುಂಟಾದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ ಕುಟುಂಬವೊಂದರ 11 ತಿಂಗಳ ಮಗು ಪವಾಡಸದೃಶವಾಗಿ ಬದುಕುಳಿದಿರುವ ಘಟನೆ ವರದಿಯಾಗಿದೆ.
ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಾಗೂ ಮೇಘ ಸ್ಫೋಟದಿಂದಾಗಿ ಹಲವು ಕಡೆ ಭೂಕುಸಿತ ಹಾಗೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ನೂರಾರು ಮಂದಿ ನಿರ್ವಸತಿಗರಾಗಿ ಬೀದಿಗೆ ಬಿದ್ದಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಈ ಭಾರಿ ಮಳೆಯಿಂದಾಗಿ 60ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಕೆಲವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಈ ನಡುವೆ, ಹಿಮಾಚಲ ಪ್ರದೇಶದ ಸೆರಾಜ್ ವಿಧಾನಸಭಾ ಕ್ಷೇತ್ರದಲ್ಲಿ ಜೂನ್ 30ರಂದು ಸುರಿದ ಭಾರಿ ಮಳೆಯಿಂದಾಗಿ ಸೃಷ್ಟಿಯಾದ ಪ್ರವಾಹದಲ್ಲಿ ಕುಟುಂಬವೊಂದು ಕೊಚ್ಚಿಕೊಂಡು ಹೋಗಿತ್ತು. ಪ್ರವಾಹದ ನೀರು ತಮ್ಮ ಮನೆಗೆ ನುಗ್ಗಿದಾಗ, ಕುಟುಂಬದ ಸದಸ್ಯರು ಪ್ರವಾಹದ ನೀರನ್ನು ಬೇರೆ ದಿಕ್ಕಿಗೆ ತಿರುಗಿಸಲು ಹರಸಾಹಸ ಮಾಡಿದ್ದಾರೆ. ಆದರೆ, ಅದು ಸಾಧ್ಯವಾಗದೆ ಹೋದಾಗ, ಇಡೀ ಕುಟುಂಬ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಈ ಘಟನೆಯ ವೇಳೆ, ಸದ್ಯ ಪವಾಡಸದೃಶ ರೀತಿಯಲ್ಲಿ ಬದುಕುಳಿದಿರುವ 11 ತಿಂಗಳ ಮಗು ನಿಕಿತಾ ಮನೆಯಲ್ಲಿ ನಿದ್ರಿಸುತ್ತಿತ್ತು ಎನ್ನಲಾಗಿದೆ.
ಈ ಪ್ರವಾಹದಲ್ಲಿ ನಿಕಿತಾಳ ತಂದೆ ರಮೇಶ್, ತಾಯಿ ರಾಧಾ, ಅಜ್ಜಿ ಪೂರ್ಣದೇವಿ ಕೊಚ್ಚಿಕೊಂಡು ಹೋಗಿದ್ದಾರೆ. ಆದರೆ ಮನೆಯಲ್ಲಿ ನಿದ್ರಿಸುತ್ತಿದ್ದ ಮಗು ಸುರಕ್ಷಿತವಾಗಿ ಉಳಿದಿದೆ ಎಂದು ಹೇಳಲಾಗಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿ ಅಧಿಕಾರಿಗಳು, ಆ ಮಗುವನ್ನು ತಮ್ಮ ವಶಕ್ಕೆ ಪಡೆದು, ಆರೈಕೆ ಕೇಂದ್ರಕ್ಕೆ ರವಾನಿಸಿದ್ದಾರೆ. ಮಹಿಳಾ ಅಧಿಕಾರಿಯೊಬ್ಬರ ಹೆಗಲ ಮೇಲೆ ಏನೂ ಅರಿಯದ ನಿಕಿತಾ ಆಟವಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತನ್ನ ಕುಟುಂಬದ ಎಲ್ಲರನ್ನೂ ಕಳೆದುಕೊಂಡು ಬದುಕುಳಿದಿರುವ ಈ 11 ತಿಂಗಳ ಮಗುವನ್ನು ಸಂಬಂಧಿಕ ಮಹಿಳೆಯೊಬ್ಬರಿಗೆ ಹಸ್ತಾಂತರಿಸಲಾಗಿದೆ. ಸದ್ಯ ನಿಕಿತಾಳ ತಂದೆಯ ಮೃತದೇಹ ಪತ್ತೆಯಾಗಿದ್ದು, ಉಳಿದವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.