BBC ಇಂಡಿಯಾಕ್ಕೆ 3.44 ಕೋಟಿ ರೂ. ದಂಡ ವಿಧಿಸಿದ ಜಾರಿ ನಿರ್ದೇಶನಾಲಯ

ಹೊಸದಿಲ್ಲಿ : ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(FEMA) ಉಲ್ಲಂಘಿಸಿದ್ದಕ್ಕಾಗಿ ಜಾರಿ ನಿರ್ದೇಶನಾಲಯ BBC ಇಂಡಿಯಾಕ್ಕೆ 3.44 ಕೋಟಿ ರೂ. ದಂಡ ವಿಧಿಸಿದೆ.
ಡಿಜಿಟಲ್ ಮಾಧ್ಯಮ ಸಂಸ್ಥೆಗಳಿಗೆ 26% ಮಿತಿಯಿದ್ದರೂ, ವಿದೇಶಿ ನಿಧಿ ಕಡಿಮೆ ಮಾಡದೆ ಕಂಪೆನಿಯು ಭಾರತದ ವಿದೇಶಿ ನಿಧಿ ಕಾನೂನನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್(ಬಿಬಿಸಿ) ಇಂಡಿಯಾ ಮತ್ತು ಅದರ ನಿರ್ದೇಶಕರಿಗೆ ಜಾರಿ ನಿರ್ದೇಶನಾಲಯ(ಈಡಿ) ದಂಡ ವಿಧಿಸಿದೆ.
1999ರ FEMA(ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ) ನಿಬಂಧನೆಗಳ ಉಲ್ಲಂಘನೆಗಾಗಿ BBC ಇಂಡಿಯಾಕ್ಕೆ 3,44,48,850 ದಂಡ ವಿಧಿಸಿದ್ದೇವೆ ಎಂದು ಅಧಿಕಾರಿಯೋರ್ವರು ತಿಳಿಸಿರುವ ಬಗ್ಗೆ hindustantimes ವರದಿ ಮಾಡಿದೆ.
ಹೆಚ್ಚುವರಿಯಾಗಿ ನಿರ್ದೇಶಕರಾದ ಗೈಲ್ಸ್ ಆಂಥೋನಿ ಹಂಟ್, ಶೇಖರ್ ಸಿನ್ಹಾ ಮತ್ತು ಮೈಕೆಲ್ ಗಿಬ್ಬನ್ಸ್ ಅವರಿಗೆ ತಲಾ 1,14,82,950ರೂ. ದಂಡ ವಿಧಿಸಲಾಗಿದೆ.
ದಿಲ್ಲಿ ಮತ್ತು ಇತರ ನಗರಗಳಲ್ಲಿನ ಬಿಬಿಸಿ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ಪರಿಶೀಲನೆ ಬಳಿಕ 2023ರಲ್ಲಿ ಬಿಬಿಸಿ ಇಂಡಿಯಾ ವಿರುದ್ಧ ಜಾರಿ ನಿರ್ದೇಶನಾಲಯ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಕುರಿತು ತನಿಖೆಯನ್ನು ಪ್ರಾರಂಭಿಸಿತ್ತು.





