ಬಿಹಾರ | 12 ಸಚಿವರು ಸೇರಿ 1,302 ಅಭ್ಯರ್ಥಿಗಳ ಭವಿಷ್ಯ ನಿರ್ಧಾರಕ್ಕೆ ಮತದಾನ ಆರಂಭ

PC | timesofindia
ಪಾಟ್ನಾ: ಎನ್ಡಿಎ ಹಾಗೂ ಇಂಡಿಯಾ ಮೈತ್ರಿಕೂಟದ ನಡುವಿನ ಹಣಾಹಣಿಗೆ ಬಿಹಾರ ಕಣ ಸಜ್ಜಾಗಿದ್ದು, ಅಂತಿಮ ಹಂತದ ಮತದಾನ ಬೆಳಿಗ್ಗೆ 7ಕ್ಕೆ ಆರಂಭವಾಗಿದೆ. 3.7 ಕೋಟಿಗೂ ಅಧಿಕ ಅರ್ಹ ಮತದಾರರು 12 ಮಂದಿ ಸಚಿವರು ಸೇರಿದಂತೆ 1,302 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ರಾಮ್, ಮಾಜಿ ಉಪಮುಖ್ಯಮಂತ್ರಿ ಹಾಗೂ 30 ಮಂದಿ ಮಾಜಿ ಸಚಿವರ ಹಣೆಬರಹವನ್ನು ಮತದಾರರು ಬರೆಯಲಿದ್ದಾರೆ. ನ.6ರಂದು ನಡೆದ ಮೊದಲ ಹಂತದ ಮತದಾನದಲ್ಲಿ ದಾಖಲೆ ಪ್ರಮಾಣದ ಅಂದರೆ ಶೇ.65ರಷ್ಟು ಮತದಾನವಾದ ಬಳಿಕ ಎರಡನೇ ಹಂತದಲ್ಲಿ 45,399 ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದೆ.
20 ಜಿಲ್ಲೆಗಳ 122 ಕ್ಷೇತ್ರಗಳಲ್ಲಿ ಮಂಗಳವಾರ ಮತದಾನ ನಡೆಯುತ್ತಿದ್ದು, ಇವಿಎಂ ಹಾಗೂ ವಿವಿಪ್ಯಾಟ್ ಘಟಕಗಳು ಸಮರ್ಪಕವಾಗಿವೆ ಎಂದು ಮುಖ್ಯ ಚುನಾವಣಾ ಅಧಿಕಾರಿ ವಿನೋದ್ ಸಿಂಗ್ ಗುಂಜಿಯಾಲ್ ಹೇಳಿದ್ದಾರೆ.
ಬಿಜೆಪಿಯ ಸಚಿವರಾದ ಪ್ರೇಮ್ಕುಮಾರ್ (ಗಯಾ ನಗರ), ರೇಣು ದೇವಿ (ಬೆಟ್ಟಿಯಾ), ನಿತೀಶ್ ಮಿಶ್ರಾ (ಝಂಝರ್ಪುರ), ವಿನಯ ಕುಮಾರ್ ಮಂಡಲ್ (ಸಿಕ್ತಿ), ಕೃಷ್ಣ ನಂದನ ಪಾಸ್ವಾನ್ (ಹರ್ಸಿದ್ದಿ) ಮತ್ತು ನೀರಜ್ ಕುಮಾರ್ ಸಿಂಗ್ ಬಬ್ಲೂ (ಛಾತ್ಪುರ), ಜೆಡಿಯು ಸಚಿವರಾದ ಬಿಜೇಂದ್ರ ಪ್ರಸಾದ್ ಯಾದವ್ (ಸುಪಾಲ್), ಶೀಲಾ ಮಂಡಲ್ (ಪುಲ್ಪರಾಸ್), ಲೇಶಿ ಸಿಂಗ್ (ಧಮ್ದಹಾ), ಜಯಂತ್ ರಾಜ್ (ಅಮರಪುರ) ಮತ್ತು ಝಾಮಾ ಖಾನ್ (ಚೈನ್ಪುರ) ಕಣದಲ್ಲಿದ್ದಾರೆ. ಪಕ್ಷೇತರ ಸಚಿವ ಸುಮಿತ್ ಕುಮಾರ್ ಸಿಂಗ್ ಅವರು ಧರ್ಮೋನ್ ಕ್ಷೇತ್ರದಿಂದ ಅದೃಷ್ಟ ಪರೀಕ್ಷಿಸುತ್ತಿದ್ದಾರೆ.
ಮತದಾನದ ಭದ್ರತಾ ವ್ಯವಸ್ಥೆ ಹಿನ್ನೆಲೆಯಲ್ಲಿ ಬೀರ್ಗಂಜ್- ರಕ್ಸುಲ್ ಸೇರಿದಂತೆ ಭಾರತ- ನೇಪಾಳ ಗಡಿಯನ್ನು 72 ಗಂಟೆ ಅವಧಿಗೆ ಮುಚ್ಚಲಾಗಿದೆ. ಮಾಜಿ ಉಪಮುಖ್ಯಮಂತ್ರಿ ತಾರಕಿಶೋರ್ ಪ್ರಸಾದ್ ಕಟಿಯಾರ್ನಿಂದ ಐದನೇ ಬಾರಿಗೆ ಆಯ್ಕೆ ಬಯಸಿದ್ದಾರೆ.







