ತೆಲಂಗಾಣ | 12 ಬಿಆರ್ಎಸ್ ಶಾಸಕರು ಶೀಘ್ರ ಕಾಂಗ್ರೆಸ್ ತೆಕ್ಕೆಗೆ?

Photo : PTI
ಹೈದರಾಬಾದ್: ಜುಲೈ ತಿಂಗಳ ಎರಡನೇ ವಾರದಲ್ಲಿ ತೆಲಂಗಾಣ ಸರ್ಕಾರ ತನ್ನ ಪೂರ್ಣಕಾಲಿಕ ಬಜೆಟ್ ಮಂಡಿಸುವ ಮುನ್ನವೇ ರಾಜ್ಯದ 12 ಬಿಆರ್ಎಸ್ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರುವ ಸಾಧ್ಯತೆಯಿದೆ. ಲೋಕಸಭಾ ಚುನಾವಣೆಗೆ ಮುನ್ನ ಮೂವರು ಬಿಆರ್ಎಸ್ ಶಾಸಕರನ್ನು ತನ್ನ ತೆಕ್ಕೆಗೆ ಕಾಂಗ್ರೆಸ್ ಸೇರಿಸಿದೆ.
ಇತ್ತೀಚಿಗಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಿದ ನಂತರ ರಾಜ್ಯದ ಕಾಂಗ್ರೆಸ್ ಸರ್ಕಾರ ಮುಂದಿನ ದಿನಗಳಲ್ಲಿ ಪತನವಾಗಲಿದೆ ಎಂದು ಕೇಸರಿ ನಾಯಕರ ಹೇಳಿಕೆಯೂ ಕಾಂಗ್ರೆಸ್ ಪಕ್ಷಕ್ಕೆ ಆತಂಕ ಮೂಡಿಸಿದೆಯೆನ್ನಲಾಗಿದೆ.
ಕೆಲ ಬಿಆರ್ಎಸ್ ಶಾಸಕರು ತಮ್ಮ ಉದ್ಯಮ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ಮುಂದಿನ ದಿನಗಳಲ್ಲಿ ಬಿಜೆಪಿ ಸೇರುತ್ತಾರೆಂಬ ಸುದ್ದಿಯೂ ಇದೆ.
ಇನ್ನೊಂದೆಡೆ ಬಿಆರ್ಎಸ್ ಮುಖ್ಯಸ್ಥ ಕೆ ಚಂದ್ರಶೇಖರ ರಾವ್ ಸಹಿತ ಇತರ ಪ್ರಮುಖ ನಾಯಕರು ತಮ್ಮ ಶಾಸಕರ ನಿವಾಸಗಳಿಗೆ ಭೇಟಿ ನೀಡಿ ಪಕ್ಷದಲ್ಲೇ ಉಳಿಯುವಂತೆ ಆಗ್ರಹಿಸುತ್ತಿದ್ದಾರಲ್ಲದೆ ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂಬ ಭರವಸೆಯನ್ನೂ ನೀಡುತ್ತಿದ್ದಾರೆ.
ನಿಝಾಮಾಬಾದ್ನ ಹಿರಿಯ ಬಿಆರ್ಎಸ್ ಶಾಸಕ ಸಹಿತ ಕೆಲವರು ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ ಎನ್ನಲಾಗಿದೆ.







