ಅಂಬರ್ನಾಥ್ನಲ್ಲಿ ಕಾಂಗ್ರೆಸ್ನಿಂದ ಅಮಾನತುಗೊಂಡಿದ್ದ 12 ಕೌನ್ಸಿಲರ್ಗಳು ಬಿಜೆಪಿಗೆ ಸೇರ್ಪಡೆ

Pc: timesofindia.indiatimes
ಥಾಣೆ: ಸ್ಥಳೀಯ ಸಂಸ್ಥೆ ಚುನಾವಣೆ ನಂತರ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಕ್ಕಾಗಿ ಕಾಂಗ್ರೆಸ್ನಿಂದ ಅಮಾನತುಗೊಂಡಿದ್ದ ಅಂಬರ್ನಾಥ್ ಪುರಸಭೆಗೆ ಹೊಸದಾಗಿ ಆಯ್ಕೆಯಾದ 12 ಕೌನ್ಸಿಲರ್ಗಳು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಮಹಾರಾಷ್ಟ್ರ ಬಿಜೆಪಿ ಘಟಕದ ಅಧ್ಯಕ್ಷ ರವೀಂದ್ರ ಚವಾಣ್ ಬುಧವಾರ ಬಿಜೆಪಿ ಕಚೇರಿಯಲ್ಲಿ ಈ ಬಗ್ಗೆ ಘೋಷಿಸಿದ್ದಾರೆ. "ಜನರು ಕೌನ್ಸಿಲರ್ಗಳನ್ನು ಆಯ್ಕೆ ಮಾಡಿದರು ಮತ್ತು ಅವರು ನಾಗರಿಕರಿಗೆ ಅಭಿವೃದ್ಧಿಯ ಭರವಸೆ ನೀಡಿದ್ದರು. ಸರಕಾರ ಕ್ರಿಯಾತ್ಮಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಮತ್ತು ಜನರಿಗೆ ನ್ಯಾಯ ಮತ್ತು ಅಭಿವೃದ್ಧಿಯನ್ನು ತಲುಪಿಸಲು ಸಮರ್ಥವಾಗಿರುವುದರಿಂದ ಅವರು ನಮ್ಮೊಂದಿಗೆ ಬಂದಿದ್ದಾರೆ" ಎಂದು ಹೇಳಿದ್ದಾರೆ.
ಡಿಸೆಂಬರ್ 20ರಂದು ನಡೆದ ಅಂಬರ್ನಾಥ್ ಪುರಸಭೆ ಚುನಾವಣೆಯಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 60 ಸ್ಥಾನಗಳಲ್ಲಿ 27 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಬಹುಮತಕ್ಕೆ ನಾಲ್ಕು ಸ್ಥಾನಗಳ ಕೊರತೆಯಿತ್ತು. ಬಿಜೆಪಿ 14 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ 12 ಸ್ಥಾನಗಳನ್ನು ಗಳಿಸಿತು. ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ನಾಲ್ಕು ಸ್ಥಾನಗಳನ್ನು ಗೆದ್ದಿದ್ದು, ಇಬ್ಬರು ಸ್ವತಂತ್ರ ಅಭ್ಯರ್ಥಿಗಳೂ ಆಯ್ಕೆಯಾಗಿದ್ದರು.
ಪುರಸಭೆ ಅಧ್ಯಕ್ಷರ ಆಯ್ಕೆ ಕುರಿತು ನಡೆದ ಚುನಾವಣೆಯಲ್ಲಿ ಶಿವಸೇನೆಗೆ ಹಿನ್ನಡೆಯಾಗಿದ್ದು, ಶಿವಸೇನಾ ಅಭ್ಯರ್ಥಿ ಮನೀಶಾ ವಾಲೇಕರ್ ಬಿಜೆಪಿಯ ತೇಜಶ್ರೀ ಕಾರಂಜುಲೆ ಪಾಟೀಲ್ ಎದುರು ಸೋಲು ಕಂಡರು. ಇದರ ಬೆನ್ನಲ್ಲೇ ಬಿಜೆಪಿ, ಕಾಂಗ್ರೆಸ್ ಹಾಗೂ ಅಜಿತ್ ಪವಾರ್ ಬಣದ ಎನ್ಸಿಪಿ ಸೇರಿಕೊಂಡು ‘ಅಂಬರ್ನಾಥ್ ವಿಕಾಸ್ ಅಘಾಡಿ’ ಎಂಬ ಹೊಸ ಮೈತ್ರಿಕೂಟವನ್ನು ರಚಿಸಿತ್ತು. ಈ ಅಘಾಡಿಯಲ್ಲಿ 14 ಬಿಜೆಪಿ ಸದಸ್ಯರು, 12 ಕಾಂಗ್ರೆಸ್ ಕೌನ್ಸಿಲರ್ಗಳು, ಎನ್ಸಿಪಿ (ಅಜಿತ್ ಪವಾರ್ ಬಣ)ದ ನಾಲ್ವರು ಹಾಗೂ ಒಬ್ಬ ಸ್ವತಂತ್ರ ಸದಸ್ಯ ಸೇರಿದ್ದರು.
ಮಹಾರಾಷ್ಟ್ರದಲ್ಲಿ ಚುನಾವಣೋತ್ತರ ಮೈತ್ರಿಗಳ ಕುರಿತು ವ್ಯಾಪಕ ರಾಜಕೀಯ ವಿವಾದದ ನಡುವೆ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿತ್ತು. ಇದರಿಂದಾಗಿ ಪಕ್ಷದ ಅನುಮೋದನೆಯಿಲ್ಲದೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ 12 ಸದಸ್ಯರನ್ನು ಅಮಾನತುಗೊಳಿಸಿತ್ತು.







