ಏಮ್ಸ್ ಬಳಿ ಪ್ರದರ್ಶನ ಫಲಕದಲ್ಲಿ 148 ಕೋಟಿ ದಾಟಿದ ಭಾರತದ ಜನಸಂಖ್ಯೆ; ವೀಡಿಯೊ ವೈರಲ್

Photo Credit ; NDTV
ಹೊಸದಿಲ್ಲಿ: ಭಾರತದ ಜನಸಂಖ್ಯೆ ಕ್ಷಿಪ್ರವಾಗಿ ಏರಿಕೆಯಾಗುತ್ತಿರುವುದನ್ನು ತೋರಿಸುವ ದಕ್ಷಿಣ ದಿಲ್ಲಿಯ ಏಮ್ಸ್ ಆಸ್ಪತ್ರೆ ಬಳಿಯ ಬೃಹತ್ ಪ್ರದರ್ಶನ ಫಲಕವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆದಿದೆ. ಫಲಕದಲ್ಲಿ ಭಾರತದ ಜನಸಂಖ್ಯೆ 148 ಕೋಟಿ ದಾಟಿರುವುದು ಕಂಡುಬಂದಿದ್ದು, ಇದರ ವೀಡಿಯೊ ವೈರಲ್ ಆಗಿದೆ.
‘ಭಾರತದ ಜನಸಂಖ್ಯೆ’ ಎಂಬ ಶೀರ್ಷಿಕೆಯ ಈ ಫಲಕದಲ್ಲಿ ಪ್ರತಿ ಕ್ಷಣವೂ ಜನಸಂಖ್ಯೆಯ ಅಂಕಿಅಂಶ ಬದಲಾಗುತ್ತಿದ್ದು, ಏರಿಕೆಯ ವೇಗವನ್ನು ಕಣ್ಣಮುಂದೆಯೇ ನೋಡುವಂತಾಗಿದೆ. ಇತ್ತೀಚಿನ ವೈರಲ್ ವೀಡಿಯೊಗಳಲ್ಲಿ ಭಾರತದ ಜನಸಂಖ್ಯೆ 1,48,16,00,000 ಎಂದು ಕಾಣಿಸಿಕೊಂಡಿದೆ. ಈ ಮೂಲಕ ದೇಶದ ಜನಸಂಖ್ಯೆ 1.5 ಶತಕೋಟಿ (150 ಕೋಟಿ) ಗಡಿಯ ಸನಿಹಕ್ಕೆ ತಲುಪಿದೆ.
ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, 2023ರಲ್ಲೇ ಭಾರತವು ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮಿತ್ತು. ದೇಶದ ಹಲವು ಭಾಗಗಳಲ್ಲಿ ಫಲವತ್ತತೆ ಪ್ರಮಾಣ ಇಳಿಕೆಯಾಗುತ್ತಿದ್ದರೂ ಭಾರತದ ಜನಸಂಖ್ಯೆ ಏರಿಕೆ ಮುಂದುವರಿದಿದೆ.
ಇನ್ನೊಂದೆಡೆ, ಕುಟುಂಬಗಳ ಗಾತ್ರ ಕುಗ್ಗುತ್ತಿರುವ ಹಿನ್ನೆಲೆಯಲ್ಲಿ ಚೀನಾದ ಜನಸಂಖ್ಯೆಯಲ್ಲಿ 33.9 ಲಕ್ಷ ಇಳಿಕೆಯಾಗಿದ್ದು, 1.404 ಶತಕೋಟಿಗೆ ತಲುಪಿದೆ.
ನೈಜ ಸಮಯದಲ್ಲಿ ದೇಶದ ಜನಸಂಖ್ಯೆಯನ್ನು ಲೆಕ್ಕ ಹಾಕುವ ಸಾಧನದಂತೆ ಕಾಣುವ ಈ ಫಲಕದ ಅಂಕಿಅಂಶಗಳನ್ನು ಕಂಡು ಸಾಮಾಜಿಕ ಮಾಧ್ಯಮ ಬಳಕೆದಾರರು ಅಚ್ಚರಿಗೊಂಡಿದ್ದಾರೆ. ಕೆಲವರು ಇದನ್ನು ಯೂಟ್ಯೂಬ್ ನಲ್ಲಿನ ನಿರಂತರವಾಗಿ ಬದಲಾಗುವ ಫಾಲೋವರ್ ಗಳ ಸಂಖ್ಯೆಯೊಂದಿಗೆ ಹೋಲಿಸಿದ್ದಾರೆ.
ಆದರೆ, ಈ ಫಲಕವು ದೇಶದಲ್ಲಿ ಸಂಭವಿಸುವ ಪ್ರತಿಯೊಂದು ಜನನ ಮತ್ತು ಸಾವನ್ನು ದಾಖಲಿಸುವುದಿಲ್ಲ. ದೇಶಾದ್ಯಂತದ ನೈಜ ಸಮಯದ ದತ್ತಾಂಶ ಅಥವಾ ಅಧಿಕೃತ ಜನಗಣತಿಯ ಅಂಕಿಅಂಶಗಳ ಬದಲಿಗೆ ಸಾಂಖ್ಯಿಕ ಮಾದರಿಗಳು ಮತ್ತು ವಿಶ್ವಸಂಸ್ಥೆಯ ಜನಸಂಖ್ಯೆಯ ಅಂದಾಜುಗಳನ್ನು ಆಧರಿಸಿ ಇದು ಕಾರ್ಯನಿರ್ವಹಿಸುತ್ತದೆ. ಹೀಗಾಗಿ, ಇದು ನೈಜ ಸಮಯದ ಜನಸಂಖ್ಯೆ ಲೆಕ್ಕಾಚಾರದ ಸಾಧನವಲ್ಲ; ಜನಸಂಖ್ಯೆಯ ಮುನ್ಸೂಚನೆಯನ್ನು ಆಧರಿಸಿದ ಲೆಕ್ಕಾಚಾರವಾಗಿದೆ.
ಈ ಡಿಜಿಟಲ್ ಜನಸಂಖ್ಯೆ ಗಡಿಯಾರವು 2026ರ ಸೆಪ್ಟೆಂಬರ್ ನಲ್ಲಿಯೂ ವ್ಯಾಪಕ ಗಮನ ಸೆಳೆದಿತ್ತು. ಆಗ ಭಾರತದ ಜನಸಂಖ್ಯೆ 147 ಕೋಟಿ ದಾಟಿರುವುದನ್ನು ಫಲಕದಲ್ಲಿ ತೋರಿಸಲಾಗಿತ್ತು.
ಜನಸಂಖ್ಯೆಯ ಮುನ್ಸೂಚನೆಗಳ ಪ್ರಕಾರ, 2028ರ ವೇಳೆಗೆ ಭಾರತದ ಜನಸಂಖ್ಯೆ 150 ಕೋಟಿ ದಾಟುವ ಸಾಧ್ಯತೆಯಿದೆ. ಆದರೆ, ಫಲವತ್ತತೆ, ಮರಣ ಪ್ರಮಾಣ ಮತ್ತು ಇತರ ಜನಸಂಖ್ಯಾ ಅಂಶಗಳಲ್ಲಿನ ಬದಲಾವಣೆಗಳನ್ನು ಅವಲಂಬಿಸಿ ಈ ಅಂದಾಜು ಬದಲಾಗಬಹುದು.
ನಿರಂತರವಾಗಿ ಏರಿಕೆಯಾಗುತ್ತಿರುವ ಜನಸಂಖ್ಯೆಯ ಅಂಕಿಅಂಶಗಳು ಜನರಲ್ಲಿ ಅಚ್ಚರಿಯ ಜೊತೆಗೆ ಆತಂಕವನ್ನೂ ಮೂಡಿಸಿವೆ.
ಈ ಕುರಿತು ಪೋಸ್ಟ್ ಮಾಡಿರುವ ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು, “ಮುಂದಿನ 30 ವರ್ಷಗಳವರೆಗೆ ಭಾರತಕ್ಕೆ ಒಂದು ಮಗುವಿನ ನೀತಿ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮತ್ತೊಬ್ಬರು, “ಮಾಲಿನ್ಯದ ಎಣಿಕೆ ಕೇಂದ್ರ ಎಲ್ಲಿದೆ?” ಎಂದು ಪ್ರಶ್ನಿಸಿದ್ದಾರೆ.
“ಏಮ್ಸ್ ನ ಜನಸಂಖ್ಯೆಯ ರೇಖಾಚಿತ್ರ ದಿಗಿಲುಗೊಳಿಸುವಂತಿದೆ! ಸಂಖ್ಯೆಗಳು ನಿರಂತರವಾಗಿ ಏರಿಕೆಯಾಗುತ್ತಿದ್ದು, ಭಾರತದ ಜನಸಂಖ್ಯೆ ಕ್ಷಿಪ್ರವಾಗಿ ಹೆಚ್ಚುತ್ತಿರುವುದನ್ನು ಸೂಚಿಸುತ್ತಿವೆ. ಇದೇ ಪ್ರವೃತ್ತಿ ಮುಂದುವರಿದರೆ ಆಸ್ಪತ್ರೆಗಳು, ಶಿಕ್ಷಣ, ಉದ್ಯೋಗಗಳು ಹಾಗೂ ಸಂಪನ್ಮೂಲಗಳ ಮೇಲೆ ಒತ್ತಡ ಹೆಚ್ಚಲಿದೆ. ಇದರಿಂದ ಗಂಭೀರ ಸವಾಲುಗಳನ್ನು ಎದುರಿಸಬೇಕಾಗುತ್ತದೆ” ಎಂದು ಮತ್ತೊಬ್ಬರು ಎಚ್ಚರಿಸಿದ್ದಾರೆ ಎಂದು NDTV ವರದಿ ಮಾಡಿದೆ.






