ದಿಲ್ಲಿಯಲ್ಲಿ ವಾಯು ಮಾಲಿನ್ಯ ವಿರೋಧಿಸಿ ಪ್ರತಿಭಟನೆ: ಪೊಲೀಸರ ಮೇಲೆ 'ಪೆಪ್ಪರ್ ಸ್ಪ್ರೇ' ಆರೋಪ, 15 ಮಂದಿ ಬಂಧನ

Photo credit: PTI
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ವಿರೋಧಿಸಿ ಇಂಡಿಯಾ ಗೇಟ್ ಬಳಿ ನಡೆದ ಪ್ರತಿಭಟನೆ ವೇಳೆ ದಿಲ್ಲಿ ಪೊಲೀಸರು 15 ಜನರನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ.
ಪ್ರತಿಭಟನಾಕಾರರು ಸಿಬ್ಬಂದಿಗಳ ಮೇಲೆ ಪೆಪ್ಪರ್ ಸ್ಪ್ರೇ ಬಳಸಿದ್ದಾರೆ. ಇದರಿಂದ ಘರ್ಷಣೆ ನಡೆಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೆಲವು ಪ್ರತಿಭಟನಾಕಾರರು ಇಂಡಿಯಾ ಗೇಟ್ ಬಳಿ ಸಿ ಹೆಕ್ಸಾಗನ್ ಪ್ರದೇಶಕ್ಕೆ ನುಗ್ಗಿ ಬ್ಯಾರಿಕೇಡ್ಗಳನ್ನು ದಾಟಲು ಪ್ರಯತ್ನಿಸಿದರು. ನಾವು ಆಂಬ್ಯುಲೆನ್ಸ್ಗಳು ಮತ್ತು ವೈದ್ಯಕೀಯ ಸಿಬ್ಬಂದಿಗಳು ಸಿಲುಕಿಕೊಂಡಿದ್ದಾರೆ ಅವರಿಗೆ ತುರ್ತಾಗಿ ಹೋಗಬೇಕಿದೆ ಎಂದು ತಿಳಿಸಿದರೂ , ಅವರು ಆಕ್ರೋಶಗೊಂಡರು. ಪರಿಸ್ಥಿತಿ ವಿಕೋಪಕ್ಕೆ ತಿರುಗಬಹುದು ಎಂದು ಅರಿತ ಪೊಲೀಸ್ ಸಿಬ್ಬಂದಿ ಪ್ರತಿಭಟನಾಕಾರರಿಗೆ ಹಿಂದೆ ಸರಿಯುವಂತೆ ಸಲಹೆ ನೀಡಿದರು. ಆದರೆ, ಪ್ರತಿಭಟನಾಕಾರರು ನಿರಾಕರಿಸಿದ್ದಾರೆ. ಕೆಲವು ಪ್ರತಿಭಟನಾಕಾರರು ಪೆಪ್ಪರ್ ಸ್ಪ್ರೇ ಬಳಸಿ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ಮಾಡಿದರು. ಮೂರರಿಂದ ನಾಲ್ಕು ಸಿಬ್ಬಂದಿಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಇದು ತುಂಬಾ ಅಸಾಮಾನ್ಯವಾಗಿತ್ತು. ಮೊದಲ ಬಾರಿಗೆ ಪ್ರತಿಭಟನಾಕಾರರು ಸಂಚಾರ ಮತ್ತು ಕಾನೂನು ಸುವ್ಯವಸ್ಥೆ ಕರ್ತವ್ಯದಲ್ಲಿದ್ದ ಅಧಿಕಾರಿಗಳ ಮೇಲೆ ಪೆಪ್ಪರ್ ಸ್ಪ್ರೇ ಬಳಸಿದರು" ಎಂದು ದಿಲ್ಲಿ ಉಪ ಪೊಲೀಸ್ ಆಯುಕ್ತ ದೇವೇಶ್ ಕುಮಾರ್ ಮಹ್ಲಾ ಹೇಳಿದ್ದಾರೆ.





