ಮೀರತ್ ಆರ್ಆರ್ಟಿಎಸ್ ಗೆ ದಾರಿ ಮಾಡಲು 150 ವರ್ಷದ ಹಳೆಯ ಮಸೀದಿ ನೆಲಸಮ !

PC: x.com/bstvlive
ಮೀರತ್: ದೆಹಲಿ-ಮೀರತ್ ಪ್ರಾದೇಶಿಕ ಕ್ಷಿಪ್ರ ಸಾಗಾಣಿಕೆ ವ್ಯವಸ್ಥೆ (ಆರ್ಆರ್ಟಿಎಸ್) ಯ ಮಾರ್ಗಮಧ್ಯದಲ್ಲಿ ಬರುವ ಕಾರಣದಿಂದ ಇಕ್ಕಟ್ಟಿನ ನಗರದಲ್ಲಿ 150 ವರ್ಷ ಹಳೆಯದಾದ ಮಸೀದಿಯನ್ನು ನೆಲಸಮಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಶುಕ್ರವಾರ ಮಸೀದಿಯ ಗೇಟು ಮತ್ತು ಕಿಟಕಿಗಳನ್ನು ಕಿತ್ತುಹಾಕಲಾಗಿದೆ ಎಂದು ಮಸೀದಿ ಸಮಿತಿ ಸದಸ್ಯರು ಹೇಳಿದ್ದಾರೆ.
ಸ್ಥಳೀಯ ಜಿಲ್ಲಾಡಳಿತದ ಆದೇಶದ ಅನ್ವಯ ಮೀರತ್ ನಗರದಿಂದ ಆರು ಕಿಲೋಮೀಟರ್ ದೂರದಲ್ಲಿರುವ ಮಸೀದಿಯನ್ನು ಧ್ವಂಸಗೊಳಿಸಲಾಗುತ್ತಿದೆ. "ದೆಹಲಿ-ಮೀರಠ್ ರಸ್ತೆಯು ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಬರುತ್ತದೆ, ರಾಷ್ಟ್ರ ರಾಜಧಾನಿ ಪ್ರದೇಶ ಸಾರಿಗೆ ನಿಗಮವು ದೆಹಲಿ-ಮೀರತ್-ಗಾಝಿಯಾಬಾದ್ ಆರ್ಆರ್ಟಿಎಸ್ ಕಾರಿಡಾರ್ ನಿರ್ಮಾಣ ಮಾಡುತ್ತಿದ್ದು, ಈ ಜಾಗದಲ್ಲಿ ಮಸೀದಿ ಇದೆ. ಅಭಿವೃದ್ಧಿ ಕಾರ್ಯಕ್ಕೆ ದಾರಿ ಮಾಡಿಕೊಡುವ ಸಲುವಾಗಿ ಮಸೀದಿ ತೆರವುಗೊಳಿಸುವಂತೆ ಉಭಯ ಇಲಾಖೆಗಳು ಮನವಿ ಮಾಡಿದ್ದವು ಎಂದು ಮೀರತ್ ನಗರದ ಹೆಚ್ಚುವರಿ ಜಿಲ್ಲಾಧಿಕಾರಿ ಬೃಜೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.
ಪರಿಹಾರ ಮೊತ್ತಕ್ಕೆ ಸಂಬಂಧಿಸಿದಂತೆ ಮಸೀದಿ ಸಮಿತಿಯ ಜತೆ ಚರ್ಚಿಸಲಾಗುತ್ತಿದೆ. ಅವರ ಕಡೆಯಿಂದ ಯಾವುದೇ ಆಕ್ಷೇಪಗಳು ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
"1857ರಲ್ಲಿ ನಿರ್ಮಾಣವಾದ ಮಸೀದಿ ಸಮುದಾಯಕ್ಕೆ ಸೇವೆ ಸಲ್ಲಿಸುತ್ತಿದೆ. ಎನ್ ಸಿಆರ್ ಟಿಸಿ ಅಧಿಕಾರಿಗಳು ನಮ್ಮನ್ನು ಸಂಪರ್ಕಿಸಿ ಚರ್ಚೆ ನಡೆಸಿದ ಬಳಿಕ ಪಥ ಬದಲಿಸುವ ಭರವಸೆ ನೀಡಿದ್ದರು. ಆದರೆ ಕೆಲ ದಿನಗಳ ಹಿಂದೆ ಜಿಲ್ಲಾಡಳಿತ ಮಸೀದಿ ತೆರವಿಗೆ ಲೋಕೋಪಯೋಗಿ ಇಲಾಖೆಗೆ ಅನುಮತಿ ನೀಡಿದೆ. ಎರಡು ದಿನಗಳ ಹಿಂದೆ, ಆರ್ಆರ್ಟಿಎಸ್ ಗೆ ಅಡ್ಡ ಬರುವ ಈ ಧಾರ್ಮಿಕ ಕಟ್ಟಡವನ್ನು ನಾವೇ ತೆರವುಗೊಳಿಸುವಂತೆ ಇಲ್ಲವೇ ಬಲವಂತದಿಂದ ನೆಲಸಮಗೊಳಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಮಸೀದಿ ಸಮಿತಿ ಸದಸ್ಯ ಮುಹಮ್ಮದ್ ವಾಸೀಂ ಖಾನ್ ವಿವರಿಸಿದ್ದಾರೆ.







