15,000 ಕೋಟಿ ರೂ. ವಸೂಲಿಯಿಂದ ವಿಜಯ್ ಮಲ್ಯ ವಿರುದ್ಧದ PMLA ಪ್ರಕರಣ ಅಂತ್ಯವಾಗದು: ED

ವಿಜಯ್ ಮಲ್ಯ | Photo Credit : PTI
ಮುಂಬೈ: ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರಿಂದ ಬ್ಯಾಂಕ್ ಗಳ ಬಾಕಿ ಹಣ ವಸೂಲಾಗಿರುವುದರಿಂದ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿ ನಡೆಯುತ್ತಿರುವ ಪ್ರಕ್ರಿಯೆಗಳು ಅಥವಾ ಕ್ರಿಮಿನಲ್ ಮೊಕದ್ದಮೆಗಳು ಅಂತ್ಯಗೊಳ್ಳುವುದಿಲ್ಲ ಎಂದು ಜಾರಿ ನಿರ್ದೇಶನಾಲಯ (ED) ಬಾಂಬೆ ಹೈಕೋರ್ಟ್ಗೆ ತಿಳಿಸಿದೆ.
ವಕೀಲ ಆಶಿಶ್ ಮೆಹ್ತಾ ಅವರ ಮೂಲಕ ಸಲ್ಲಿಸಿರುವ ಉತ್ತರದಲ್ಲಿ ED, ಬ್ಯಾಂಕ್ ಗಳ ಒಕ್ಕೂಟ ಗಣನೀಯ ಮೊತ್ತವನ್ನು ವಸೂಲಿ ಮಾಡಿರುವುದು ಒಂದು ವಿಷಯವಾದರೆ, ಮಲ್ಯ ವಿರುದ್ಧದ ಆರೋಪಿತ ಅಪರಾಧಗಳು ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕ್ರಿಯೆಗಳು ಮತ್ತೊಂದು ವಿಷಯ ಎಂದು ಹೇಳಿದೆ.
ಬ್ಯಾಂಕ್ ಗಳು ವಸೂಲಿ ಮಾಡಿರುವ ಮೊತ್ತವು ಬಾಕಿ ಇರುವ ಸಿವಿಲ್ ಹೊಣೆಗಾರಿಕೆಯ ಲೆಕ್ಕಾಚಾರದ ಮೇಲೆ ಪರಿಣಾಮ ಬೀರಬಹುದು. ಆದರೆ, ಮಲ್ಯ ವಿರುದ್ಧದ ಆರೋಪಿತ ಅಪರಾಧಗಳು ಸಾಬೀತಾಗಿವೆಯೇ ಎಂಬುದನ್ನು ನಿರ್ಧರಿಸಲು ಅದರಿಂದ ಸಾಧ್ಯವಿಲ್ಲ ಎಂದು ED ಪ್ರತಿಪಾದಿಸಿದೆ.
ಮಲ್ಯ ಅವರು ಭಾರತದಿಂದ ನಿರಂತರವಾಗಿ ದೂರ ಉಳಿದಿರುವುದನ್ನೂ, ಸಮರ್ಥ ಕ್ರಿಮಿನಲ್ ನ್ಯಾಯಾಲಯದ ವ್ಯಾಪ್ತಿಗೆ ಒಳಪಡಲು ವಿಫಲರಾಗಿರುವುದನ್ನೂ ED ನ್ಯಾಯಾಲಯದ ಗಮನಕ್ಕೆ ತಂದಿದೆ. ಅವರು ಕೋರಿರುವ ಪರಿಹಾರವನ್ನು ಪರಿಗಣಿಸುವಾಗ ಈ ಅಂಶಗಳು ಪ್ರಸ್ತುತವಾಗಿವೆ ಎಂದು ಸಂಸ್ಥೆ ಹೇಳಿದೆ.
‘ಅವರ ನಿರಂತರ ಗೈರುಹಾಜರಿ ಮತ್ತು ನಡವಳಿಕೆಯು ಪ್ರಸ್ತುತ ಪ್ರಕ್ರಿಯೆಗಳ ಒಟ್ಟಾರೆ ವಾಸ್ತವಿಕ ಹಿನ್ನೆಲೆಗೆ ಸಂಬಂಧಿಸಿದ ಅಂಶಗಳಾಗಿವೆ’ ಎಂದು ED ತಿಳಿಸಿದೆ.
ತಮ್ಮ ಸಿವಿಲ್ ಹೊಣೆಗಾರಿಕೆಗಳು ಪರಿಣಾಮಕಾರಿಯಾಗಿ ಇತ್ಯರ್ಥಗೊಂಡಿವೆ ಎಂಬ ಕಾರಣ ನೀಡಿ, ಹೈಕೋರ್ಟ್ ನಲ್ಲಿ ದೀರ್ಘಕಾಲದಿಂದ ಬಾಕಿ ಇರುವ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಮಲ್ಯ ಕೋರಿದ್ದರು. ಬಡ್ಡಿ ಸೇರಿದಂತೆ ಸುಮಾರು 6,203 ಕೋಟಿ ರೂ. ಮೊತ್ತದ ಮೂಲ ಹಕ್ಕಿನ ವಿರುದ್ಧ, ಎಸ್ಬಿಐ ನೇತೃತ್ವದ ಬ್ಯಾಂಕ್ ಗಳ ಒಕ್ಕೂಟವು ಸುಮಾರು 15,000 ಕೋಟಿ ರೂ. ವಸೂಲಿ ಮಾಡಿದೆ ಎಂದು ಅವರ ವಕೀಲರು ವಾದಿಸಿದ್ದರು.
ವಸೂಲಿಗೂ ಕ್ರಿಮಿನಲ್ ಪ್ರಕ್ರಿಯೆಗೂ ಸಂಬಂಧವಿಲ್ಲ
ಈ ವಿವಾದವು ಮೂಲಭೂತವಾಗಿ ವಾಣಿಜ್ಯ ಸ್ವರೂಪದ್ದಾಗಿದೆ ಎಂಬ ಮಲ್ಯ ಅವರ ವಾದವನ್ನು ED ತಿರಸ್ಕರಿಸಿದೆ. ಬ್ಯಾಂಕ್ ಗಳ ಬಾಕಿ ವಸೂಲಿಯನ್ನು ಕ್ರಿಮಿನಲ್ ಪ್ರಕ್ರಿಯೆಗಳ ಮುಂದುವರಿಕೆಯೊಂದಿಗೆ ಜೋಡಿಸುವುದು ತಪ್ಪು ಕಲ್ಪನೆ ಎಂದು ಅದು ಹೇಳಿದೆ.
PMLA ಪ್ರಕರಣವು ಆರೋಪಿತ ಪರಿಶಿಷ್ಟ ಅಪರಾಧಗಳು ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ್ದು, ಸಾಲ ನೀಡಿದ ಬ್ಯಾಂಕ್ ಗಳು ಆರಂಭಿಸಿರುವ ವಸೂಲಿ ಪ್ರಕ್ರಿಯೆಗಳಿಂದ ಅದು ಪ್ರತ್ಯೇಕವಾಗಿದೆ ಎಂದು ED ಸ್ಪಷ್ಟಪಡಿಸಿದೆ.
‘ಬ್ಯಾಂಕ್ ಗಳು ವಸೂಲಿ ಮಾಡಿದ ಮೊತ್ತ ಮತ್ತು ವಸೂಲಿ ಪ್ರಕ್ರಿಯೆಯಲ್ಲಿ ನಿರ್ಧರಿಸಲಾದ ಹೊಣೆಗಾರಿಕೆಯು ಬ್ಯಾಂಕ್ಗಳಿಗೆ ಬಾಕಿ ಇರುವ ಮೊತ್ತವನ್ನು ನಿರ್ಧರಿಸುವ ಉದ್ದೇಶಕ್ಕೆ ಪ್ರಸ್ತುತವಾಗಬಹುದು. ಆದರೆ, ಅದು ನಿರ್ದಿಷ್ಟ ಅಪರಾಧಗಳ ಅಂಶಗಳು ಅಥವಾ ಅಕ್ರಮ ಹಣ ವರ್ಗಾವಣೆಯ ಅಪರಾಧ ಸಾಬೀತಾಗಿದೆಯೇ ಎಂಬುದನ್ನು ನಿರ್ಧರಿಸುವುದಿಲ್ಲ’ ಎಂದು ಸಂಸ್ಥೆ ಹೇಳಿದೆ.
ಆಸ್ತಿಗಳ ವಸೂಲಿಯಿಂದಲೂ ಕ್ರಿಮಿನಲ್ ಪ್ರಕ್ರಿಯೆಗಳು ರದ್ದಾಗುವುದಿಲ್ಲ ಎಂದು ED ತಿಳಿಸಿದೆ. ಮುಂಬೈನ ವಿಶೇಷ PMLA ನ್ಯಾಯಾಲಯವು ಆಸ್ತಿ ಮರುಸ್ಥಾಪನೆ ಪ್ರಕ್ರಿಯೆಯಲ್ಲಿ ಹೊರಡಿಸಿದ ಆದೇಶಗಳನ್ವಯ, ಸುಮಾರು 14,131.60 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ವಸೂಲಿ ಮಾಡಲಾಗಿದೆ ಅಥವಾ ಎಸ್ಬಿಐ ನೇತೃತ್ವದ ಒಕ್ಕೂಟಕ್ಕೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದೆ.
PMLAಯ ಸೆಕ್ಷನ್ 8(8) ಅಡಿ ಆಸ್ತಿಗಳ ವಸೂಲಿಯು, ಆಸ್ತಿಯಲ್ಲಿ ನ್ಯಾಯಸಮ್ಮತ ಹಿತಾಸಕ್ತಿ ಹೊಂದಿರುವ ಹಕ್ಕುದಾರರಿಗೆ ಆಸ್ತಿಯನ್ನು ಮರಳಿಸುವ ಶಾಸನಬದ್ಧ ಕಾರ್ಯವಿಧಾನವಾಗಿದೆ. ಇದು ಸ್ವತಃ ‘ನಿಗದಿತ ಅಪರಾಧ’ ಅಥವಾ ‘ಅಕ್ರಮ ಹಣ ವರ್ಗಾವಣೆ’ ಅಪರಾಧದ ಅಸ್ತಿತ್ವವನ್ನು ನಿರ್ಧರಿಸುವುದಿಲ್ಲ ಎಂದು ED ಹೇಳಿದೆ.
ಆದ್ದರಿಂದ, ಆಸ್ತಿಗಳ ಬಳಿಕದ ಮರುಸ್ಥಾಪನೆ ಅಥವಾ ವಸೂಲಿಯನ್ನು ಆಧಾರವಾಗಿಟ್ಟುಕೊಂಡು PMLA ಅಡಿ ಬಾಕಿ ಇರುವ ಕಾನೂನು ಪ್ರಕ್ರಿಯೆಗಳು ರದ್ದಾಗಿವೆ ಅಥವಾ ನಿಷ್ಪ್ರಯೋಜಕವಾಗಿವೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ED ತನ್ನ ಉತ್ತರದಲ್ಲಿ ತಿಳಿಸಿದೆ.
2019ರಲ್ಲಿ ಪಲಾಯನಗೈದ ಆರ್ಥಿಕ ಅಪರಾಧಿ
2016ರಲ್ಲಿ ಭಾರತ ತೊರೆದ ಬಳಿಕ ಯುಕೆಯಲ್ಲಿ ನೆಲೆಸಿರುವ ಮಲ್ಯ ಅವರನ್ನು 2019ರಲ್ಲಿ ‘ಪಲಾಯನಗೈದ ಆರ್ಥಿಕ ಅಪರಾಧಿ’ (FEO) ಎಂದು ಘೋಷಿಸಲಾಗಿತ್ತು. ಅವರ ದೀರ್ಘಕಾಲದ ಕಾನೂನು ಹೋರಾಟದಲ್ಲಿ ‘ಪಲಾಯನಗೈದ ಆರ್ಥಿಕ ಅಪರಾಧಿಗಳ ಕಾಯ್ದೆ’ಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವುದು ಹಾಗೂ ತಮ್ಮನ್ನು ಆ ಕಾಯ್ದೆಯಡಿ ಪಲಾಯನಗೈದ ಆರ್ಥಿಕ ಅಪರಾಧಿ ಎಂದು ಘೋಷಿಸಿದ ಪ್ರಕ್ರಿಯೆಯನ್ನು ಪ್ರಶ್ನಿಸುವುದೂ ಸೇರಿದೆ.
ಭಾರತಕ್ಕೆ ಮರಳಿ ಇಲ್ಲಿನ ನ್ಯಾಯವ್ಯಾಪ್ತಿಗೆ ಒಳಪಡಲು ಉದ್ದೇಶವಿದೆಯೇ ಎಂಬುದನ್ನು ಸ್ಪಷ್ಟಪಡಿಸಲು ಮಲ್ಯ ಅವರಿಗೆ ಬಾಂಬೆ ಹೈಕೋರ್ಟ್ ಇತ್ತೀಚೆಗೆ ಅಂತಿಮ ಅವಕಾಶ ನೀಡಿದೆ.
EDಯ ನಿಲುವು ಹಾಗೂ ಮಲ್ಯ ವಿರುದ್ಧ ಬಾಕಿ ಇರುವ ಕಾನೂನು ಪ್ರಕ್ರಿಯೆಗಳ ಸ್ಥಿತಿಗತಿಯನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯ ಈ ವಿಷಯವನ್ನು ಮತ್ತಷ್ಟು ಪರಿಗಣಿಸುವ ನಿರೀಕ್ಷೆಯಿದೆ.






