West Bengal | ಕೋಲ್ಕತ್ತಾ ದುರ್ಗಾ ಪೂಜಾ ಪೆಂಡಾಲ್ ನಲ್ಲಿ ಕಾಲ್ತುಳಿತ; ಕನಿಷ್ಠ 17 ಮಂದಿ ಮೃತ್ಯು

Photo Credit : NDTV
ಕೋಲ್ಕತ್ತಾ: ಉತ್ತರ ಕೋಲ್ಕತ್ತಾದ ‘ಚೋರ್ ಬಗಾನ್ ಸಾರ್ವಜನಿಕ ಪೂಜಾ’ ಪೆಂಡಾಲ್ ನಲ್ಲಿ ಶನಿವಾರ ಸಂಭವಿಸಿದ ಕಾಲ್ತುಳಿತ ಕನಿಷ್ಠ 17 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಳಿಕ ಪರಿಸ್ಥಿತಿಯನ್ನು ಅವಲೋಕಿಸಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮತ್ತು ಮುಖ್ಯ ಕಾರ್ಯದರ್ಶಿ ಮನೋಜ್ ಅಗರ್ವಾಲ್ ಅವರು ಕಲ್ಕತ್ತಾ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ದುರ್ಗಾ ಪೂಜಾ ಪೆಂಡಾಲ್ ನಲ್ಲಿ ಈ ಘಟನೆ ಸಂಭವಿಸಿದೆ. ಕಾಲ್ತುಳಿತದ ಸಂದರ್ಭದಲ್ಲಿ ಅನೇಕರು ಪ್ರಜ್ಞೆ ತಪ್ಪಿದ್ದರು. ಗಾಯಗೊಂಡ ಹಲವರನ್ನು ಮೋಟಾರ್ ಸೈಕಲ್ ಗಳಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಸುದ್ದಿ ಸಂಸ್ಥೆ ANIಗೆ ತಿಳಿಸಿದ್ದಾರೆ.
ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಘಟನೆಯ ಬಗ್ಗೆ ತೀವ್ರ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಹಾಗೂ ಈ ಕಠಿಣ ಸಮಯದಲ್ಲಿ ಅವರ ಕುಟುಂಬಗಳಿಗೆ ಶಕ್ತಿ ಮತ್ತು ಧೈರ್ಯ ಸಿಗಲಿ ಎಂದು ಅವರು ಹಾರೈಸಿದ್ದಾರೆ.
‘ಚೋರ್ ಬಗಾನ್ ಪೂಜಾ ಪೆಂಡಾಲ್ ನಲ್ಲಿ ಸಂಭವಿಸಿದ ನೂಕುನುಗ್ಗಲಿನ ಬಗ್ಗೆ ತಿಳಿದು ತೀವ್ರ ಆಘಾತ ಮತ್ತು ದುಃಖವಾಗಿದೆ. ಗಾಯಗೊಂಡವರೆಲ್ಲರೂ ಶೀಘ್ರ ಗುಣಮುಖರಾಗಲಿ ಎಂದು ತಾಯಿ ದುರ್ಗೆಯಲ್ಲಿ ಪ್ರಾರ್ಥಿಸುತ್ತೇನೆ. ಈ ಕಠಿಣ ಸಮಯದಲ್ಲಿ ಅವರ ಕುಟುಂಬಗಳಿಗೆ ಶಕ್ತಿ ಮತ್ತು ಧೈರ್ಯ ಸಿಗಲಿ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.






