ರಾಷ್ಟ್ರೀಯ ತಂತ್ರಜ್ಞಾನ ದಿನ | 1998ರ ಪೋಖ್ರಾನ್ ಪರಮಾಣು ಪರೀಕ್ಷೆ ಭಾರತದ ವಿಜ್ಞಾನಿಗಳ ಉತ್ಕೃಷ್ಟತೆಯನ್ನು ಪ್ರತಿಫಲಿಸಿತು: ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ | Photo Credit : PTI
ಹೊಸದಿಲ್ಲಿ: 1998ರ ಪೋಖ್ರಾನ್ ಪರಮಾಣು ಪರೀಕ್ಷೆ ಭಾರತೀಯ ವಿಜ್ಞಾನಿಗಳ ಉತ್ಕೃಷ್ಟತೆಯನ್ನು ಪ್ರತಿಫಲಿಸಿತು ಎಂದು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಮೇ 11, 1998ರಂದು ರಾಜಸ್ಥಾನದ ಪೋಖ್ರಾನ್ ನಲ್ಲಿ ಯಶಸ್ವಿಯಾಗಿ ನಡೆಸಿದ ಪರಮಾಣು ಪರೀಕ್ಷೆಯ ಸ್ಮರಣಾರ್ಥ ಆಚರಿಸುವ ರಾಷ್ಟ್ರೀಯ ತಂತ್ರಜ್ಞಾನ ದಿನದಂದು ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ, ಸ್ವಾವಲಂಬಿ ಭಾರತವನ್ನು ನಿರ್ಮಿಸುವಲ್ಲಿ ತಂತ್ರಜ್ಞಾನ ಪ್ರಮುಖ ಸ್ತಂಭವಾಗಿ ಬದಲಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, “ರಾಷ್ಟ್ರೀಯ ತಂತ್ರಜ್ಞಾನ ದಿನದ ಶುಭಾಶಯಗಳು. 1998ರಲ್ಲಿ ಪೋಖ್ರಾನ್ನಲ್ಲಿ ನಮ್ಮ ವಿಜ್ಞಾನಿಗಳ ಕಠಿಣ ಪರಿಶ್ರಮ ಮತ್ತು ಬದ್ಧತೆಯಿಂದ ನಡೆದ ಯಶಸ್ವಿ ಪರಮಾಣು ಪರೀಕ್ಷೆಯನ್ನು ನಾವಿಂದು ಹೆಮ್ಮೆಯಿಂದ ಸ್ಮರಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.
ಸ್ವಾವಲಂಬಿ ಭಾರತವನ್ನು ನಿರ್ಮಿಸುವಲ್ಲಿ ತಂತ್ರಜ್ಞಾನ ಪ್ರಮುಖ ಸ್ತಂಭವಾಗಿ ಬದಲಾಗಿದ್ದು, ಆವಿಷ್ಕಾರ, ಅವಕಾಶಗಳ ವಿಸ್ತರಣೆ ಮತ್ತು ಎಲ್ಲ ವಲಯಗಳಲ್ಲಿ ದೇಶದ ಪ್ರಗತಿಗೆ ಕೊಡುಗೆ ನೀಡುವಲ್ಲಿ ವೇಗವರ್ಧಕವಾಗಿ ಬದಲಾಗಿದೆ ಎಂದು ಅವರು ತಿಳಿಸಿದ್ದಾರೆ.
“ಪ್ರತಿಭೆಗಳ ಬಲವರ್ಧನೆ, ಸಂಶೋಧನೆಯ ಉತ್ತೇಜನ ಮತ್ತು ರಾಷ್ಟ್ರೀಯ ಪ್ರಗತಿ ಹಾಗೂ ಜನರ ಬಯಕೆಗಳೆರಡನ್ನೂ ಪೂರೈಸುವ ಪರಿಹಾರಗಳನ್ನು ಸೃಷ್ಟಿಸುವ ಕಡೆ ನಮ್ಮ ಗಮನ ನಿರಂತರವಾಗಿ ಕೇಂದ್ರೀಕೃತವಾಗಿರಲಿದೆ” ಎಂದು ಅವರು ಹೇಳಿದ್ದಾರೆ.
1998ರಲ್ಲಿ ಪೋಖ್ರಾನ್ನಲ್ಲಿ ನಡೆಸಿದ ಪರಮಾಣು ಪರೀಕ್ಷೆ ಭಾರತದ ಸಾಮರ್ಥ್ಯವನ್ನು ವಿಶ್ವಕ್ಕೆ ಪರಿಚಯಿಸಿತು. ದೇಶದ ಹೆಮ್ಮೆ ಮತ್ತು ಆತ್ಮಗೌರವದ ನಿಜವಾದ ಶಿಲ್ಪಿಗಳು ನಮ್ಮ ವಿಜ್ಞಾನಿಗಳು ಎಂದು ಅವರು ಶ್ಲಾಘಿಸಿದ್ದಾರೆ.
ಮೇ 11 ಹಾಗೂ 13ರಂದು ರಾಜಸ್ಥಾನದ ಮರುಭೂಮಿ ವಲಯವಾದ ಪೋಖ್ರಾನ್ ನಲ್ಲಿ ಭಾರತ ಐದು ಸುಧಾರಿತ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಗಳನ್ನು ನಡೆಸಿತ್ತು. ಮೊದಲ ಮೂರು ಸ್ಫೋಟಗಳು ಮೇ 11ರ ಮಧ್ಯಾಹ್ನ 3.45 ಗಂಟೆಗೆ ಒಂದೇ ಬಾರಿಗೆ ನಡೆದಿದ್ದವು.






