ಒಡಿಶಾ: ಗೋ ಕಳ್ಳಸಾಗಣೆ ಶಂಕೆಯಲ್ಲಿ ಇಬ್ಬರು ದಲಿತರ ಮೇಲೆ ಹಲ್ಲೆ ನಡೆಸಿ, ತಲೆ ಬೋಳಿಸಿದ ದುಷ್ಕರ್ಮಿಗಳ ಗುಂಪು
ಬಲವಂತವಾಗಿ ಹುಲ್ಲು ತಿನ್ನಿಸಿ, ಚರಂಡಿ ನೀರು ಕುಡಿಸಿದ ಸ್ವಘೋಷಿತ ಗೋರಕ್ಷಕರು

Photo credit: X/@Deb_livnletliv
ಬರ್ಹಂಪುರ್: ಗೋ ಕಳ್ಳಸಾಗಣೆ ಮಾಡಿದ ಶಂಕೆಯ ಮೇಲೆ ಇಬ್ಬರು ದಲಿತರ ಮೇಲೆ ಹಲ್ಲೆ ನಡೆಸಿ, ಅವರ ತಲೆ ಬೋಳಿಸಿ, ಅವರು ನೆಲದ ಮೇಲೆ ಮೊಣಕಾಲಿನಲ್ಲಿ ತೆವಳುವಂತೆ ಮಾಡಿರುವ ಆಘಾತಕಾರಿ ಘಟನೆ ಒಡಿಶಾದ ಗಂಜಂ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ, ಸಂತ್ರಸ್ತ ವ್ಯಕ್ತಿಗಳಿಗೆ ದುಷ್ಕರ್ಮಿಗಳು ಬಲವಂತವಾಗಿ ಹುಲ್ಲು ತಿನ್ನಿಸಿ, ಚರಂಡಿ ನೀರು ಕುಡಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಈ ಘಟನೆ ಇತ್ತೀಚೆಗೆ ಧಾರಾಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಖರಿಗುಮ್ಮ ಗ್ರಾಮದ ಜಹದಾದಲ್ಲಿ ನಡೆದಿದೆ ಎಂದು ಹೇಳಲಾಗಿದ್ದು, ಈ ಘಟನೆಯ ವಿರುದ್ಧ ರಾಜಕೀಯ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಹಲ್ಲೆ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲೂ ವೈರಲ್ ಆಗಿದೆ.
ಸಿಂಗಿಪುರ್ ಗ್ರಾಮದ ಸಂತ್ರಸ್ತ ವ್ಯಕ್ತಿಗಳಾದ ಬಬುಲಾ ನಾಯಕ್ (54) ಹಾಗೂ ಬಾಬು ನಾಯಕ್ (42) ವಾಹನವೊಂದರಲ್ಲಿ ಹರಿಯೌರ್ ನಿಂದ ತಮ್ಮ ಗ್ರಾಮಕ್ಕೆ ಎರಡು ಹಸು ಹಾಗೂ ಒಂದು ಕರುವನ್ನು ಸಾಗಿಸುವಾಗ ಸ್ವಯಂಘೋಷಿತ ಗೋರಕ್ಷಕರ ತಂಡವೊಂದು ಅವರನ್ನು ಖರಿಗುಮ್ಮ ಬಳಿ ಅಡ್ಡಗಟ್ಟಿ, ಗೋ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಈ ಗುಂಪು ಸಂತ್ರಸ್ತ ವ್ಯಕ್ತಿಗಳ ಬಳಿ 30,000 ರೂ.ಗೆ ಬೇಡಿಕೆ ಇರಿಸಿದೆ. ಅದಕ್ಕೆ ಅವರು ನಿರಾಕರಿಸಿದಾಗ, ಅವರ ಮೇಲೆ ಹಲ್ಲೆ ನಡೆಸಿರುವ ಗುಂಪು, ಅವರಿಗೆ ಕೀಳು ದರ್ಜೆಯ ಕಿರುಕುಳ ನೀಡಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
“ಬಳಿಕ ಅವರನ್ನು ಕ್ಷೌರದ ಅಂಗಡಿಯೊಂದಕ್ಕೆ ಕರೆದೊಯ್ದಿರುವ ಈ ದುಷ್ಕರ್ಮಿಗಳ ಗುಂಪು, ಅವರ ತಲೆಯನ್ನು ಅರ್ಧ ಬೋಳಿಸಿದೆ. ನಂತರ, ಬಲವಂತವಾಗಿ ಅವರಿಗೆ ನೆಲದ ಮೇಲೆ ಮೊಣಕಾಲಿನಲ್ಲಿ ತೆವಳುವಂತೆ ಮಾಡಿರುವ ಈ ಗುಂಪು, ಅವರಿಗೆ ಹುಲ್ಲು ತಿನ್ನಿಸಿ, ಚರಂಡಿ ನೀರು ಕುಡಿಯುವಂತೆ ಮಾಡಿದೆ” ಎಂದೂ ಅವರು ತಿಳಿಸಿದ್ದಾರೆ.
ಘಟನೆಯ ನಂತರ, ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದು, ಸಂತ್ರಸ್ತರು ನೀಡಿದ ದೂರನ್ನು ಆಧರಿಸಿ ರವಿವಾರ ಸಂಜೆ ಧಾರಾಕೋಟೆ ಠಾಣೆಯ ಪೊಲೀಸರು ಅವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.







